ಹೊಸ ದಿಗಂತ ವರದಿ, ದಾವಣಗೆರೆ:
ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಗೆ ಅನುಮತಿ ನೀಡಿದ್ದರೆ, ರಾಜ್ಯಾದ್ಯಂತ ಹಿಂದು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ವಿತರಣೆ ಮಾಡಲಾಗುವುದು ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 40 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವೇ ವಿದ್ಯಾರ್ಥಿಗಳಲ್ಲಿ ಶ್ರೀಮಂತರು, ಬಡವರು, ರೈತರು, ಕಾರ್ಮಿಕರು ಎಂಬ ಭೇದಭಾವ ಇರಬಾರದೆಂಬ ಕಾರಣಕ್ಕೆ ಸಮಾನತೆ, ಏಕತೆ ಮೂಡಿಸಲು ಸಮವಸ್ತ್ರ ವ್ಯವಸ್ಥೆ ಜಾರಿಗೆ ತಂದಿತ್ತು. ಇದೀಗ ಇದೇ ಕಾಂಗ್ರೆಸ್ ಸರ್ಕಾರ ತನ್ನದೇ ವ್ಯವಸ್ಥೆಯನ್ನು ಉಲ್ಲಂಘಿಷಿ, ಹಿಜಾಬ್ ಗೆ ಅನುಮತಿ ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಕೋಮುಭಾವನೆ ಬಿತ್ತುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಆದೇಶ ಹಿಂಪಡೆಯಬೇಕು
ಶಾಲೆಯಲ್ಲಿ ಕೆಲವರು ಹಿಜಾಬ್ ಹಾಕಿಕೊಂಡು ಬಂದಾಕ್ಷಣ ಇವರು ಮುಸ್ಲಿಂ ಅನ್ನೋ ಭೇದ ಅಲ್ಲಿಂದಲೇ ಪ್ರಾರಂಭವಾಗುತ್ತದೆ. ಹಿಂದುಗಳು ಧರಿಸುವ ಜನಿವಾರ, ಶಿವದಾರ ಹೊರಗಡೆ ಕಾಣುವುದಿಲ್ಲ. ಆದರೂ ಅದಕ್ಕೆ ನಾವು ಅವಕಾಶ ಕೊಟ್ಟಿದ್ದೇವೆ ಎನ್ನುತ್ತಾರೆ. ಅದಕ್ಕೆಲ್ಲಾ ಅವಕಾಶ ಕೊಡಲು ಅವರ್ಯಾರು? ಇವತ್ತು ಹಿಜಾಬ್, ನಾಳೆ ಬುರ್ಕಾ, ನಾಡಿದ್ದು ಶಾಲೆಯಲ್ಲಿಯೇ ನಮಾಜ್ ಗೆ ಅನುಮತಿ ಕೇಳುವಂತಹ ಮಾನಸಿಕತೆ ಮುಸ್ಲಿಮರಲ್ಲಿ ಇದೆ. ಆದ್ದರಿಂದ ಕೂಡಲೇ ಸರ್ಕಾರ ತನ್ನ ಆದೇಶ ಹಿಂಪಡೆಯಬೇಕು. ಇಲ್ಲವಾದರೆ ಜೂನ್ 1ರಿಂದ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಹಿಂದು ವಿದ್ಯಾರ್ಥಿಗಳಿಗೆ ಶ್ರೀರಾಮಸೇನೆ ವತಿಯಿಂದ ಕೇಸರಿ ಶಾಲು ಹಂಚುತ್ತೇವೆ ಎಂದು ಅವರು ಎಚ್ಚರಿಸಿದರು.
5 ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ
ದಕ್ಷಿಣ ಭಾರತದ ಕಡೆ ಅಕ್ರಮ ಬಾಂಗ್ಲಾ ವಲಸಿಗರು ಹೆಚ್ಚಾಗಿ ಬರುತ್ತಿದ್ದಾರೆ. ತಮಿಳುನಾಡು, ಕೇರಳ ಸೇರಿದಂತೆ ಕಾಂಗ್ರೆಸ್ ಆಡಳಿತದ ಸರ್ಕಾರಗಳೇ ಇದಕ್ಕೆ ಕಾರಣ. ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್, ವೋಟರ್ ಕಾರ್ಡ್ ಕೂಡ ಸಿಗುತ್ತವೆ. ಅದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ಕ್ರಮ ವಹಿಸಬೇಕು. ಇಲ್ಲದಿದ್ದರೆ ಬಾಂಗ್ಲಾ ಮುಸ್ಲಿಂ ವಲಸಿಗರಿಂದ ದೇಶಕ್ಕೆ ಆಪತ್ತು ಬಂದೊದಗಲಿದೆ ಎಂದರಲ್ಲದೆ, ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದ್ದರಿಂದ ಶ್ರೀರಾಮಸೇನೆಯಿಂದ 5 ಸಾವಿರ ಮಹಿಳೆಯರಿಗೆ ತ್ರಿಶೂಲ ದೀಕ್ಷೆ ನೀಡಲಾಗುವುದು ಎಂದು ತಿಳಿಸಿದರು.
ಗೋಹತ್ಯೆ ತಡೆಯಲು ಆಗ್ರಹ
ಗೋಹತ್ಯೆ ನಿಷೇಧಿಸುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ನಾನು ಪತ್ರ ಬರೆದಿದ್ದೇನೆ. ಕೇಂದ್ರಕ್ಕೆ 50 ಸಾವಿರ ಕೋಟಿ ರೂ. ಆದಾಯ ಗೋಮಾಂಸ ರಫ್ತಿನಿಂದ ಬರುತ್ತಿದೆ. ಒಂದು ಕಡೆ ಗೋಮಾತೆ ಎನ್ನುತ್ತಾ, ಮತ್ತೊಂದು ಕಡೆ ಗೋಮಾಂಸ ರಫ್ತಿಗೆ ಸಹಕಾರ ನೀಡುವ ದ್ವಂದ್ವ ನೀತಿಯನ್ನು ಕೇಂದ್ರ ಸರ್ಕಾರ ಕೈ ಬಿಡಬೇಕು. ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಲ್ಲಿದ್ದರೂ ಗೋಹತ್ಯೆ ನಿರಂತರವಾಗಿದೆ. ಮುಸ್ಲಿಂ ಮತ ಬ್ಯಾಂಕ್ ಗಾಗಿ ಯಾರೊಬ್ಬರೂ ಇದರ ವಿರುದ್ಧ ಮಾತಾಡುತ್ತಿಲ್ಲ. ಬಕ್ರೀದ್ ಸಂದರ್ಭದಲ್ಲಿ ಗೋಹತ್ಯೆ ತಡೆಗೆ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.



