ಹೊಸದಿಗಂತ ಡಿಜಿಟಲ್ ಡೆಸ್ಕ್
ಅದೊಂದು ಕಾಲವಿತ್ತು.. ಐಪಿಎಲ್ ನ ಸ್ಟಾರ್ ಪ್ರಾಂಚೈಸಿ ಆರ್ಸಿಬಿ ಪರ ವಿಶ್ವದ ಶ್ರೇಷ್ಠ ಕ್ರಿಕೆಟಿಗರಾದ ಗೇಲ್, ಎಬಿಡಿ ಹಾಗೂ ಕೊಹ್ಲಿ ಒಟ್ಟಿಗೆ ಆಡುತ್ತಿದ್ದರು. ಆರ್ಸಿಬಿ ಅಭಿಮಾನಿಗಳು ಮಾತ್ರವಲ್ಲ ವಿಶ್ವದ ಕ್ರೀಡಾಭಿಮಾನಿಗಳೆಲ್ಲ ಈ ತ್ರಿಮೂರ್ತಿಗಳ ವಿಧ್ವಂಸಕ ಬ್ಯಾಟಿಂಗ್ ಕಣ್ಣು ತುಂಬಿಕೊಳ್ಳಲು ಪಂದ್ಯದ ದಿನ ಕಾತರದಿಂದ ಟಿವಿ ಮುಂದೆ ಕುಳಿತಿರುತ್ತಿದ್ದರು.
ಕೆಲ ವರ್ಷಗಳ ಬಳಿಕ ಮುಂದೆ ಗೇಲ್ ತಂಡದಿಂದ ಹೊರಬಿದ್ದರು. ಆದರೆ ಆರ್ಸಿಬಿ ಅಭಿಮಾನಿಗಳಿಗೆ ಎಲ್ಲದಕ್ಕಿಂತ ದೊಡ್ಡ ಶಾಕ್ ಎದುರಾಗಿದ್ದು 2021ರ ನವೆಂಬರ್ ನಲ್ಲಿ. ಅಭಿಮಾನಿಗಳ ಆರಾಧ್ಯದೈವ, ಆರ್ಸಿಬಿ ಪಾಲಿನ ಆಪತ್ಬಾಂಧವನಾಗಿದ್ದ ಅಬ್ರಹಂ ಬೆಂಜಮಿನ್ ಡಿವಿಲಿಯರ್ಸ್ ಒಮ್ಮೆಲೆ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದರು.
ಆರ್ಸಿಬಿ ಪರ ಬ್ಯಾಟಿಂಗ್ ನಲ್ಲಿ ಅದ್ಭುತ ಯಶಸ್ಸು ಸಾಧಿಸಿದ್ದ ಎಬಿಡಿ ಕೊನೆಗೂ ಅವರಾಸೆಯಂತೆ IPL ಟ್ರೋಫಿಯನ್ನು ಮಾತ್ರ ಎತ್ತಿಹಿಡಿಯಲು ಸಾಧ್ಯವಾಗಿರಲಿಲ್ಲ. ಎಬಿಡಿ ನಿವೃತ್ತಿಯಿಂದ ಹೊರಬರಲಿ, ಮತ್ತೆ ಆರ್ಸಿಬಿ ಪರ ಆಡಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಲೇ ಇದ್ದರು. ಎಬಿಡಿ ಕಂಬ್ಯಾಕ್ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿದ್ದವು. ಅದರಲ್ಲೂ ಐಪಿಎಲ್ 2023 ರ ವೇಳೆ ಬೆಂಗಳೂರಿನ ಚಿನ್ನಸ್ವಾಮಿಗೆ ಮರಳುವುದಾಗಿ ಕೆಲದಿನಗಳ ಹಿಂದೆ ಎಬಿಡಿ ಘೋಷಿಸಿದ್ದರು.
ಇದೀಗ ಮತ್ತೊಮ್ಮೆ ಅಬಿಮಾನಿಗಳ ಮುಂದೆ ಬಂದಿರುವ ಎಬಿಡಿ, ತಾನು ಮತ್ತೆ ಆರ್ಸಿಬಿ ಪರ ಆಡುವುದಿಲ್ಲ ಎಂಬ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ʼಮುಂದಿನ ವರ್ಷ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೋಗುತ್ತೇನೆ. ಆದರೆ ಕ್ರಿಕೆಟ್ ಆಡಲು ಅಲ್ಲ. ಇಲ್ಲಿಯವರೆಗೆ ಐಪಿಎಲ್ ಪ್ರಶಸ್ತಿ ಗೆಲ್ಲದಿದ್ದಕ್ಕಾಗಿ ಆರ್‌ಸಿಬಿ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಲಿದ್ದೇನೆ. ಕಳೆದ ದಶಕದಲ್ಲಿ ಅವರ ಬೆಂಬಲಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ನಾನು ಇನ್ನು ಮುಂದೆ ಕ್ರಿಕೆಟ್ ಆಡಲು ಸಾಧ್ಯವಿಲ್ಲ. ಏಕೆಂದರೆ ನನ್ನ ಬಲಗಣ್ಣಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆʼ ಎಂದು ಡಿವಿಲಿಯರ್ಸ್ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.
ತಮ್ಮ 14 ವರ್ಷಗಳ ಸುದೀರ್ಘ ಐಪಿಎಲ್ ವೃತ್ತಿಜೀವನದಲ್ಲಿ, ಎಬಿಡಿ 184 ಪಂದ್ಯಗಳಲ್ಲಿ 5162 ರನ್ಗಳನ್ನು ಸಿಡಿಸಿದ್ದಾರೆ, ಇದರಲ್ಲಿ ಮೂರು ಶತಕಗಳು ಮತ್ತು 40 ಅರ್ಧ ಶತಕಗಳು ಸೇರಿವೆ. ಹಲವಾರು ಅಸಾಧ್ಯವೆನಿಸುವ ಪಂದ್ಯಗಳನ್ನು ಗೆದ್ದುಕೊಟ್ಟಿದ್ದಾರೆ. ಮತ್ತೊಮ್ಮೆ ಆರ್ಸಿಬಿ ಪರ ಆಡಲು ಸಾಧ್ಯವಾಗುವುದಿಲ್ಲ ಎಂಬ ಎಬಿಡಿ ಮಾತುಗಳು ಅಭಿಮಾನಿಗಳ ಹೃದಯ ಭಗ್ನಗೊಳಿಸಿದೆ. ಆರ್ಸಿಬಿ ಜೊತೆಗೆ ಅಪಾರ ನೆನಪುಗಳನ್ನು ಬಿಟ್ಟುಹೊಗಿರುವ ಎಬಿಡಿ ಮತ್ತೊಮ್ಮೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬಂದು ಬೆಂಬಲಿಸಿದ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಲಿದ್ದಾರೆ.
ಜೊತೆಗೆ ತರಬೇತುದಾರನಾಗಿಯೂ ಎಬಿಡಿ ಐಪಿಎಲ್ ಗೆ ಮರಳುವುದಿಲ್ಲ ಎಂಬುದು ಖಚಿವಾಗಿದೆ. ನಾನು ತರಬೇತಿ ನೀಡಲು ಯೋಚಿಸುತ್ತಿಲ್ಲ. 18 ವರ್ಷಗಳ ಪ್ರಯಾಣದ ನಂತರ ಮನೆಯಲ್ಲಿ ಸ್ವಲ್ಪ ಸಮಯ ಕಳೆಯಲು ನನಗೆ ತುಂಬಾ ಸಂತೋಷವಾಗಿದೆ,ʼ ಎಂದು ಅವರು ಹೇಳಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಎರಡನೇ ಆವೃತ್ತಿಯಲ್ಲಿ ಆಡಲು ತನ್ನನ್ನು ಆಹ್ವಾನಿಸಲಾಗಿತ್ತು. ಆದರೆ, ಕಣ್ಣಿನ ಆಪರೇಷನ್‌ನಿಂದಾಗಿ ಅದನ್ನು ತಪ್ಪಿಸಿಕೊಂಡೆ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. “ನನಗೂ ಈಗ ಸಾಕಷ್ಟು ವಯಸ್ಸಾಗಿದೆ. ಲೆಜೆಂಡ್ಸ್ ಲೀಗ್ ಬಹಳಷ್ಟು ಮೋಜು ತೋರುತ್ತದೆ. ನನ್ನನ್ನು ಆಹ್ವಾನಿಸಲಾಗಿತ್ತು, ಆದರೆ ನಾನು ಕಣ್ಣಿನ ಆಪರೇಷನ್ ಮಾಡಿಸಿಕೊಂಡಿದ್ದೇನೆ. ನಾನು ಒಂದೇ ಕಣ್ಣಿನಲ್ಲಿ ಆಡಲಾಗುವುದಿಲ್ಲವಲ್ಲ ಅದಕ್ಕೆ ಹೋಗಿಲ್ಲ ಎಂದು ಎಂದು ಡಿವಿಲಿಯರ್ಸ್ ಹೇಳಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ