September 13, 2026
Sunday, September 13, 2026
spot_img

ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಬಿಡ್ತಾರಾ?: ಬಿಗ್ ಟ್ರೇಡ್ ಕುರಿತು ಭವಿಷ್ಯ ನುಡಿದ ಆರ್. ಅಶ್ವಿನ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಐಪಿಎಲ್ 2026ರ ಸೀಸನ್‌ನಲ್ಲಿ ಮುಂಬೈ ಇಂಡಿಯನ್ಸ್ (MI) ತಂಡದ ಕಳಪೆ ಪ್ರದರ್ಶನದ ನಂತರ, ನಾಯಕ ಹಾರ್ದಿಕ್ ಪಾಂಡ್ಯ ಅವರ ಭವಿಷ್ಯದ ಕುರಿತು ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗಳು ನಡೆಯುತ್ತಿವೆ. ಈ ನಡುವೆ ಭಾರತ ತಂಡದ ಮಾಜಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಈ ಮೆಗಾ ಟ್ರೇಡ್ ಹೇಗೆ ನಡೆಯಬಹುದು ಎಂಬ ಬಗ್ಗೆ ತಮ್ಮದೇ ಆದ ವಿಶ್ಲೇಷಣೆ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ ಕಳೆದ ಮೂರು ಸೀಸನ್‌ಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಪ್ಲೇಆಫ್ ತಲುಪಿದೆ. ಇತ್ತೀಚಿನ 2026ರ ಐಪಿಎಲ್ ಸೀಸನ್‌ನಲ್ಲಿ 5 ಬಾರಿಯ ಚಾಂಪಿಯನ್ಸ್ ಮುಂಬೈ ತಂಡವು ಪಾಯಿಂಟ್ಸ್ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಕುಸಿಯುವ ಮೂಲಕ ನಿರಾಶೆ ಮೂಡಿಸಿತ್ತು.

ಸಿಎಸ್‌ಕೆ ಮತ್ತು ಕೆಕೆಆರ್ ರೇಸ್‌ನಲ್ಲಿ

ಸದ್ಯದ ಮಾಹಿತಿ ಪ್ರಕಾರ, ಹಾರ್ದಿಕ್ ಪಾಂಡ್ಯ ಅವರನ್ನು ತಮ್ಮ ತಂಡಕ್ಕೆ ಸೆಳೆದುಕೊಳ್ಳಲು ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಗಳು ಭಾರಿ ಆಸಕ್ತಿ ತೋರಿಸುತ್ತಿವೆ. ಮುಂಬೈ ತಂಡವು ಹಾರ್ದಿಕ್‌ರನ್ನು ಬಿಟ್ಟುಕೊಡಲು ನಿರ್ಧರಿಸಿದರೆ, ಈ ಎರಡು ತಂಡಗಳೇ ಮುಂಚೂಣಿಯಲ್ಲಿರಲಿವೆ ಎಂದು ಅಶ್ವಿನ್ ತಿಳಿಸಿದ್ದಾರೆ.

ಕೆಕೆಆರ್ ಎದುರು ಅಶ್ವಿನ್ ಇಟ್ಟ ಡಿಮ್ಯಾಂಡ್ ಏನು?

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಅಶ್ವಿನ್, “ಒಂದು ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದೊಂದಿಗೆ ಮುಂಬೈ ಒಪ್ಪಂದ ಮಾಡಿಕೊಳ್ಳುವುದಾದರೆ, ಅದರಿಂದ ಮುಂಬೈ ತಂಡಕ್ಕೆ ಹೆಚ್ಚಿನ ಲಾಭವಾಗಬೇಕು. ಸಿಎಸ್‌ಕೆ ತಂಡವು ಶಿವಂ ದುಬೆ ಮತ್ತು ಒಬ್ಬ ವೇಗದ ಬೌಲರ್ ನೀಡಲು ಸಿದ್ಧವಿದೆ ಎನ್ನಲಾಗುತ್ತಿದೆ. ಇತ್ತ ಕೆಕೆಆರ್ ಕ್ಯಾಮರೂನ್ ಗ್ರೀನ್ ಅವರನ್ನು ನೀಡಲು ಮುಂದಾಗಿದೆ. ಆದರೆ ಗ್ರೀನ್ ಮುಂದಿನ ವರ್ಷ ಆ್ಯಶಸ್ ಸರಣಿಯತ್ತ ಗಮನ ಹರಿಸಿದರೆ ಮುಂಬೈಗೆ ನಷ್ಟ. ಹೀಗಾಗಿ ನಾನು ಮುಂಬೈ ಇಂಡಿಯನ್ಸ್ ಮ್ಯಾನೇಜ್ಮೆಂಟ್ ಜಾಗದಲ್ಲಿ ಇದ್ದಿದ್ದರೆ, ಕೆಕೆಆರ್‌ನಿಂದ ಹರ್ಷಿತ್ ರಾಣಾ ಮತ್ತು ರಿಂಕು ಸಿಂಗ್ ಅವರನ್ನು ಬದಲಿಯಾಗಿ ನೀಡಿದರೆ ಮಾತ್ರ ಹಾರ್ದಿಕ್‌ರನ್ನು ಬಿಟ್ಟುಕೊಡುತ್ತಿದ್ದೆ. ಆಗ ಮಾತ್ರ ಮುಂಬೈ ಮತ್ತಷ್ಟು ಬಲಿಷ್ಠವಾಗುತ್ತದೆ” ಎಂದಿದ್ದಾರೆ.

ಪ್ರತಿಸ್ಪರ್ಧಿಗಳ ಬಲದ ಬಗ್ಗೆ ಎಚ್ಚರಿಕೆ

ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಕೈಬಿಡುವ ಮುನ್ನ ಮುಂಬೈ ಇಂಡಿಯನ್ಸ್, ತನ್ನ ನೇರ ಪ್ರತಿಸ್ಪರ್ಧಿ ತಂಡಗಳು ಎಷ್ಟು ಬಲಿಷ್ಠವಾಗುತ್ತವೆ ಎಂಬುದನ್ನು ಯೋಚಿಸಬೇಕು ಎಂದು ಅಶ್ವಿನ್ ಎಚ್ಚರಿಸಿದ್ದಾರೆ. “ಹಾರ್ದಿಕ್ ಕೆಕೆಆರ್ ತಂಡ ಸೇರಿದರೆ ಅವರ ಬ್ಯಾಟಿಂಗ್ ಲೈನ್ ಅಪ್ ಅತ್ಯಂತ ಭೀಕರವಾಗಲಿದೆ. ಈಗಾಗಲೇ ಈ ಮೂರು ತಂಡಗಳು ಐದು ಮತ್ತು ಮೂರು ಟ್ರೋಫಿಗಳನ್ನು ಗೆದ್ದಿವೆ. ಹೀಗಾಗಿ ಪ್ರತಿಸ್ಪರ್ಧಿ ತಂಡಗಳು ತನ್ನನ್ನು ಮೀರಿಸಿ ಮುನ್ನಡೆಯದಂತೆ ಮುಂಬೈ ಜಾಣತನದ ನಿರ್ಧಾರ ತೆಗೆದುಕೊಳ್ಳಬೇಕಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:

ಪಾಂಡ್ಯ ಕಳಪೆ ಫಾರ್ಮ್:

ಐಪಿಎಲ್ 2026ರಲ್ಲಿ ಹಾರ್ದಿಕ್ ಪಾಂಡ್ಯ ಪ್ರದರ್ಶನ ತೀರಾ ಸಾಧಾರಣವಾಗಿತ್ತು. ಆಡಿದ 10 ಪಂದ್ಯಗಳಲ್ಲಿ ಅವರು ಕೇವಲ 206 ರನ್ ಗಳಿಸಿ, 4 ವಿಕೆಟ್ ಮಾತ್ರ ಪಡೆಯಲು ಶಕ್ತರಾಗಿದ್ದರು. ಐಪಿಎಲ್ ಮುಗಿದ ನಂತರ 32 ವರ್ಷದ ಹಾರ್ದಿಕ್ ಯಾವುದೇ ಸ್ಪರ್ಧಾತ್ಮಕ ಕ್ರಿಕೆಟ್ ಆಡಿಲ್ಲ. ಇದು ಮುಂಬೈ ಇಂಡಿಯನ್ಸ್ ತಂಡದಲ್ಲಿ ಅವರ ಮುಂದಿನ ಭವಿಷ್ಯದ ಕುರಿತಾದ ಅನುಮಾನಗಳನ್ನು ಮತ್ತಷ್ಟು ಹೆಚ್ಚಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !