ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದ ರಾಣಿ ಚನ್ನಮ್ಮ (ಈದ್ಗಾ ಮೈದಾನ) ಮೈದಾನದಲ್ಲಿ ಗಣೇಶೋತ್ಸವದ ಆಚರಣೆಗೆ ಅವಕಾಶ ಮಾಡಿಕೊಡುವವರೆಗೂ ಆಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಶಾಸಕ ಅರವಿಂದ ಬೆಲ್ಲದ ಅವರು ಹೇಳಿದರು.
ಶಾಸಕರ ನೇತೃತ್ವದಲ್ಲಿ ಇಂದು ಬಿಜೆಪಿ ಪಾಲಿಕೆಯ ಎಲ್ಲ ಸದಸ್ಯರು ಸೇರಿ ಸುದೀರ್ಘ ಚರ್ಚೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಾನಗರ ಪಾಲಿಕೆ ಆಯುಕ್ತರು ಸರ್ಕಾರದ ಕೈಗೊಂಬೆಯಾಗಿದ್ದಾರೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗಣೇಶೋತ್ಸವ ಆಚರಣೆ ಅವಕಾಶ ನೀಡಬೇಕು ಎಂದು ಠರಾವು ಪಾಸ್ ಆದರೂ ಸಹ ಆಯುಕ್ತರು ಅನುಮತಿ ನೀಡುತ್ತಿಲ್ಲ. ಅನುಮತಿ ನೀಡುವವರೆಗೂ ಪಾಲಿಕೆ ಕಚೇರಿಯಲ್ಲಿ ಅಹೋರಾತ್ರಿ ಧರಣಿ ಕೂಡಲಾಗುವುದು ಎಂದು ತಿಳಿಸಿದರು.
ರಾಣಿ ಚನ್ನಮ್ಮ ಮೈದಾನದಲ್ಲಿ ಕಳೆದ ವರ್ಷ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಆಚರಿಸಲಾಗಿದೆ. ಈ ಬಾರಿ ಸರ್ಕಾರ ಇದಕ್ಕೆ ಅನುಮತಿ ನೀಡದೆ ಅಲ್ಪಸಂಖ್ಯಾತರ ಓಲೈಕೆ ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಕೇವಲ ಅಲ್ಪಸಂಖ್ಯಾತರು ಅಷ್ಟೇ ಮತ ಹಾಕಿಲ್ಲ ಹಿಂದೂಗಳು ಕೂಡ ಮತ ಹಾಕಿದ್ದಾರೆ. ಈ ರೀತಿ ಮಾಡುತ್ತಿರುವುದರಿಂದ ಹಿಂದೂಗಳ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದರು.
ಈ ವೇಳೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಅನುಮತಿ ನೀಡಲು ಘೋಷಣೆ ಕೂಗಿದರು. ಪಾಲಿಕೆ ಆವರಣದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ.