ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ (Suvarna Vidhan Soudha) ಅಳವಡಿಸಲಾಗಿರುವ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ (Veer Savarkar) ಅವರ ಭಾವಚಿತ್ರ ತೆರವು ಮಾಡುವ ಯಾವುದೇ ಪ್ರಸ್ತಾಪ ಬಂದಿಲ್ಲ ಎಂದು ವಿಧಾನಸಭಾ ಸ್ಪೀಕರ್ ಯುಟಿ ಖಾದರ್ (UT Khader) ತಿಳಿಸಿದ್ದಾರೆ.
ಸಾವರ್ಕರ್ ಭಾವಚಿತ್ರ ತೆಗೆಯಬೇಕೇ ಎಂಬ ಬಗ್ಗೆ ಸ್ಪೀಕರ್ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದರು.
ಸದ್ಯಕ್ಕೆ ಅಂತಹ ಯಾವುದೇ ಪ್ರಸ್ತಾಪ ನಮಗೆ ಬಂದಿಲ್ಲ. ಬಂದರೆ ಆವಾಗ ನೋಡೋಣ, ಈಗಲೇ ಬ್ಯಾಟ್ ಬೀಸಿದ್ರೆ ಆಗುತ್ತಾ? ಸಂವಿಧಾನ ಬದ್ಧವಾಗಿ ಏನು ಮಾಡಬೇಕು ಅದನ್ನು ಮಾಡುತ್ತೇನೆ. ನನಗೆ ಸಚಿವರೂ ಒಂದೇ, ಪ್ರತಿಪಕ್ಷದವರೂ ಒಂದೇ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಹೇಳಿಕೆ ನೀಡಲು ಎಲ್ಲರಿಗೂ ಅವಕಾಶವಿದೆ. ಯಾವುದೇ ವಿಚಾರವಿದ್ದರೂ ಸಂವಿಧಾನ ಬದ್ಧವಾಗಿ ಕರ್ತವ್ಯ ನಿರ್ವಹಿಸುವೆ ಎಂದು ಖಾದರ್ ಹೇಳಿದ್ದಾರೆ.
ಸುವರ್ಣಸೌಧದಲ್ಲಿ ಜವಾಹರಲಾಲ್ ನೆಹರೂ ಅವರ ಭಾವಚಿತ್ರ ಅಳವಡಿಸುವ ಪ್ರಸ್ತಾವ ಇದೆ ಎಂದು ಯುಟಿ ಖಾದರ್ ಕೆಲವು ದಿನಗಳ ಹಿಂದೆ ಹೇಳಿದ್ದರು. ಅದರ ಬೆನ್ನಲ್ಲೇ, ಕಾಂಗ್ರೆಸ್ ಸರ್ಕಾರ ಸಾವರ್ಕರ್ ಫೋಟೋ ತೆಗೆದುಹಾಕಿ ನೆಹರೂ ಫೋಟೋ ಅಳವಡಿಸಲು ಮುಂದಾಗಿದೆ ಎಂಬ ವದಂತಿ ಹರಡಿತ್ತು.