ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ದದ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ 5 ವಿಕೆಟ್ ಗೆಲುವು ದಾಖಲಿಸಿದೆ.
ಶ್ರೀಲಂಕಾ ನೀಡಿದ 171 ರನ್ ಟಾರ್ಗೆಟನ್ನು ನ್ಯೂಜಿಲೆಂಡ್ 23.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ಸೆಮಿಫೈನಲ್ ಸ್ಥಾನ ಬಹುತೇಕ ಖಚಿತಗೊಂಡಿದೆ. ಇತ್ತ ಪಾಕಿಸ್ತಾನದ ಸೆಮೀಸ್ ಹಾದಿ ಬಹುತೇಕ ಕಮರಿದೆ.
150ಕ್ಕೂ ಹೆಚ್ಚಿನ ಬಾಲ್ ಉಳಿಸಿ ನ್ಯೂಜಿಲೆಂಡ್ ಪಂದ್ಯ ಗೆದ್ದುಕೊಂಡಿದೆ. ಹೀಗಾಗಿ ಪಾಕಿಸ್ತಾನ ತನ್ನ ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ ಗೆಲುವು ಸಾಧಿಸಿದರೆ ಸಾಲದು, ಸೆಮಿಫೈನಲ್ ಸ್ಥಾನ ಖಚಿತಪಡಿಸಲು ಕನಿಷ್ಠ 270ಕ್ಕೂ ಹೆಚ್ಚು ರನ್ ಗೆಲುವು ಅಥವಾ 275 ಬಾಲ್ ಬಾಕಿ ಉಳಿಸಿ ಪಂದ್ಯ ಗೆಲ್ಲಬೇಕು. ಹೀಗಾದಲ್ಲಿ ಮಾತ್ರ ನ್ಯೂಜಿಲೆಂಡ್ ನೆಟ್ ರನ್ ರೇಟ್ ಹಿಂದಿಕ್ಕಲು ಸಾಧ್ಯ. ಹೀಗಾಗಿ ಈ ಎರಡು ಅವಕಾಶಗಳು ಪಾಕಿಸ್ತಾನ ತಂಡದ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಕಠಿಣಗೊಳಿಸಿದೆ.
ನ್ಯೂಜಿಲೆಂಡ್ ಸದ್ಯ ತನ್ನ 9 ಲೀಗ್ ಪಂದ್ಯದಿಂದ 5 ಗೆಲುವಿನ ಮೂಲಕ 10 ಅಂಕ ಸಂಪಾದಿಸಿದೆ. ನೆಟ್ ರನ್‌ರೇಟ್ +0.922. ಇತ್ತ ಪಾಕಿಸ್ತಾನ 8 ಪಂದ್ಯಗಳಿಂದ 4 ಗೆಲುವಿನ ಮೂಲಕ 8 ಅಂಕ ಸಂಪಾದಿಸಿದೆ. ಪಾಕಿಸ್ತಾನಕ್ಕೆ ಇನ್ನೊಂದು ಪಂದ್ಯ ಬಾಕಿ ಇದೆ. ಕೊನೆಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ, ಇಂಗ್ಲೆಂಡ್ ವಿರುದ್ದ ಗೆಲುವು ದಾಖಲಿಸಿದರೆ 10 ಅಂಕ ಆಗಲಿದೆ. ಆದರೆ ನೆಟ್ ರನ್‌ರೇಟ್ ಅಂತಿಮ ನಿರ್ಧಾರ ಮಾಡುತ್ತೆ.