ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಇಂದು ಅತ್ಯಂತ ಮಹತ್ವದ ದಿನವಾಗಿ ಮಾರ್ಪಡುತ್ತಿದೆ. ಸುದೀರ್ಘ ಕಾಲದ ನಂತರ ಬಂಗಾಳದ ಮಣ್ಣಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಚಾರ ವೈಖರಿ ಮತ್ತು ತಂತ್ರಗಾರಿಕೆ ಕೆಲಸ ಮಾಡಿದಂತೆ ತೋರುತ್ತಿದೆ. ಪ್ರಸ್ತುತ ಲಭ್ಯವಿರುವ ಚುನಾವಣಾ ಫಲಿತಾಂಶದ ಮುನ್ನಡೆಯ ಅಂಕಿಅಂಶಗಳ ಪ್ರಕಾರ, ಭಾರತೀಯ ಜನತಾ ಪಾರ್ಟಿ ಬಂಗಾಳದಲ್ಲಿ ಅಭೂತಪೂರ್ವ ಯಶಸ್ಸಿನತ್ತ ಹೆಜ್ಜೆ ಹಾಕುತ್ತಿದೆ.
ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಒಟ್ಟು 294 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಬರೋಬ್ಬರಿ 194 ಸ್ಥಾನಗಳಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ. ಈ ಮೂಲಕ ರಾಜ್ಯದಲ್ಲಿ ಅಧಿಕಾರ ರಚಿಸಲು ಬೇಕಾದ ಮ್ಯಾಜಿಕ್ ಸಂಖ್ಯೆಯಾದ 148 ಅನ್ನು ಬಿಜೆಪಿ ಸುಲಭವಾಗಿ ದಾಟಿದೆ. ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರ ನಿರಂತರ ಪ್ರಚಾರ ಹಾಗೂ ‘ಸೋನಾರ್ ಬಾಂಗ್ಲಾ’ ನಿರ್ಮಾಣದ ಭರವಸೆಗೆ ಮತದಾರರು ಮನ್ನಣೆ ನೀಡಿದಂತಿದೆ.
ಕಳೆದ ಮೂರು ಅವಧಿಗಳಿಂದ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಈ ಬಾರಿ ಭಾರೀ ಹಿನ್ನಡೆ ಅನುಭವಿಸಿದೆ. ಸದ್ಯಕ್ಕೆ ಟಿಎಂಸಿ ಕೇವಲ 92 ಸ್ಥಾನಗಳಲ್ಲಿ ಮಾತ್ರ ಮುನ್ನಡೆಯಲ್ಲಿದ್ದು, ಅಧಿಕಾರ ಉಳಿಸಿಕೊಳ್ಳುವ ಹಾದಿ ಕಠಿಣವಾಗಿದೆ. ಆಡಳಿತ ವಿರೋಧಿ ಅಲೆ ಮತ್ತು ಪ್ರಧಾನಿ ಮೋದಿಯವರ ಜನಪ್ರಿಯತೆ ದೀದಿಯ ಭದ್ರಕೋಟೆಯನ್ನು ಸಡಿಲಗೊಳಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಬಂಗಾಳದಾದ್ಯಂತ ಬಿಜೆಪಿ ಕಾರ್ಯಕರ್ತರು ಈಗಾಗಲೇ ವಿಜಯೋತ್ಸವ ಆರಂಭಿಸಿದ್ದು, ರಾಜ್ಯದಲ್ಲಿ ಹೊಸ ರಾಜಕೀಯ ಪರ್ವ ಶುರುವಾಗುವ ಮುನ್ಸೂಚನೆ ಸಿಕ್ಕಿದೆ. ಅಂತಿಮ ಫಲಿತಾಂಶ ಪ್ರಕಟವಾಗುವಷ್ಟರಲ್ಲಿ ಈ ಅಂಕಿಅಂಶಗಳಲ್ಲಿ ಸಣ್ಣ ಬದಲಾವಣೆಗಳಾಗಬಹುದಾದರೂ, ಸದ್ಯದ ಟ್ರೆಂಡ್ ಮಾತ್ರ ಕೇಸರಿ ಪಡೆಗೆ ಭರ್ಜರಿ ಬಹುಮತವನ್ನು ಸೂಚಿಸುತ್ತಿದೆ.



