ಬಿಜೆಪಿ ಗೆಲ್ಲಿಸುವುದು ಮೊದಲ ಅಜೆಂಡಾ: ಪರಿಷತ್ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ

ಹೊಸದಿಗಂತ ವರದಿ,ಚಿತ್ರದುರ್ಗ:  
ಮುಂದಿನ ತಿಂಗಳು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸುವುದು ಮೊದಲ ಅಜೆಂಡಾ, ಪಕ್ಷಕ್ಕೆ ದ್ರೋಹ ಮಾಡಿದವರನ್ನು ಸೋಲಿಸುವುದು ಎರಡನೇ ಅಜೆಂಡಾ ಎಂದು ಆಗ್ನೇಯ ಪದವೀಧರ ಶಿಕ್ಷಕರ ಕ್ಷೇತ್ರ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.

ವಿಧಾನ ಪರಿಷತ್ ಚುನಾವಣೆ ಸಂಬಂಧ ಬಿಜೆಪಿ ಕಚೇರಿಯಲ್ಲಿ ಬುಧವಾರ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ವೈ.ಎ.ನಾರಾಯಣಸ್ವಾಮಿ, ವಿಧಾನ ಪರಿಷತ್‌ನಲ್ಲಿ ಕಳೆದ ೨೦ ವರ್ಷಗಳಿಂದಲೂ ಬಿಜೆಪಿ ಬಹುಮತ ಕಾಪಾಡಿಕೊಂಡು ಬರುತ್ತಿದೆ. ಈ ಬಾರಿಯ ಚುನಾವಣೆಯಲ್ಲಿ ನನ್ನ ಗೆಲುವು ನಿಶ್ಚಿತ. ಸೂಕ್ಷ್ಮಮತಿಗಳಾಗಿರುವ ಪದವೀಧರ ಶಿಕ್ಷಕರುಗಳ ಬಳಿ ನವಿರಾಗಿ ಮಾತನಾಡಿ ನನ್ನ ಪರ ಮತ ಯಾಚಿಸಿ ಗೆಲುವಿಗೆ ಶ್ರಮಿಸಿ ನಿಮ್ಮ ಜೊತೆ ನಾನಿದ್ದೇನೆಂದು ಭರವಸೆ ನೀಡಿದರು.

ರಾಜ್ಯ, ರಾಷ್ಟ್ರೀಯ ನಾಯಕರುಗಳು ಸೇರಿ ಈ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿಕೊಳ್ಳಲು ಹೊರಟಿದ್ದಾರೆ. ವಿಧಾನ ಪರಿಷತ್‌ನಲ್ಲಿ ನಮ್ಮ ಬಲ ಜಾಸ್ತಿ ಇದ್ದರೆ ಕಾಂಗ್ರೆಸ್ ತರುವ ಕಾಯಿದೆಗಳನ್ನು ಪ್ರಶ್ನಿಸಬಹುದು. ಹಾಗಾಗಿ ಗೆಲ್ಲುವ ಅನಿವಾರ್ಯತೆ ವಿಧಾನ ಪರಿಷತ್ ಚುನಾವಣೆಗಿದೆ. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಶಿಕ್ಷಣ ಕ್ಷೇತ್ರದಲ್ಲಿ ಅವಾಂತರವಾಗಿದೆ. ಶಿಕ್ಷಣ ಮಂತ್ರಿ ಮಧು ಬಂಗಾರಪ್ಪನವರಿಗೆ ಕನ್ನಡ ಓದಲು ಸರಿಯಾಗಿ ಬರಲ್ಲ. ವರ್ಷಕ್ಕೆ ಮೂರು ಪರೀಕ್ಷೆ ನಡೆಸಲು ಹೊರಟು ಸುಮ್ಮನಾದರು ಎಂದು ವಾಗ್ದಾಳಿ ನಡೆಸಿದರು.

ಹತ್ತನೇ ತರಗತಿ ಪರೀಕ್ಷೆಯಲ್ಲಿ ಸಿ.ಸಿ.ಕ್ಯಾಮರಾ ಅಳವಡಿಸಿ ಭಯೋತ್ಪಾದಕರಂತೆ ಮಕ್ಕಳನ್ನು ಹೆದರಿಸಿ ಪರೀಕ್ಷೆ ಬರೆಸಿ ೨೦ ಪರ್ಸೆಂಟ್ ಗ್ರೇಸ್ ಮಾರ್ಕ್ಸ್ ನೀಡಿ ಕಾಂಗ್ರೆಸ್ ಸರ್ಕಾರ ಮಾನ ಉಳಿಸಿಕೊಂಡಿದೆ ಎಂದು ತರಾಟೆ ತೆಗೆದುಕೊಂಡು ಮುಖ್ಯ ಶಿಕ್ಷಕರು, ಶಿಕ್ಷಕರುಗಳಿಗೆ ಎರಡು ತಿಂಗಳಿನಿಂದ ಸಂಬಳ ನೀಡಿಲ್ಲ. ಸಿ.ಸಿ.ಕ್ಯಾಮರಾ ಅಳವಡಿಸಲು ಖರ್ಚಾಗುವ ಎರಡು ಲಕ್ಷ ರೂ.ಗಳನ್ನು ನೀಡುವವರು ಯಾರು ಎಂದು ಪ್ರಶ್ನಿಸಿದರು.

ಶಿಕ್ಷಕರುಗಳು ಮಕ್ಕಳಿಗೆ ಪಾಠ ಮಾಡುವುದರ ಜೊತೆ ಗಣತಿ ಕೆಲಸವನ್ನು ಮಾಡಬೇಕು. ಕಡಿಮೆ ಫಲಿತಾಂಶ ಬಂದಿರುವ ಶಿಕ್ಷಕರುಗಳಿಗೆ ರಾಜ್ಯ ಸರ್ಕಾರ ನೋಟಿಸ್ ಕೊಡುತ್ತಿದೆ. ಪಿ.ಯು. ಐ.ಟಿ.ಐ. ಕಾಲೇಜುಗಳನ್ನು ಮುಚ್ಚಲು ಹೊರಟಿದೆ. ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆ ಬರೆದ ಎಂಟುವರೆ ಲಕ್ಷ ಮಕ್ಕಳಲ್ಲಿ ಆರು ಲಕ್ಷ ಮಕ್ಕಳು ಪಾಸ್ ಆಗಿದ್ದಾರೆ. ಉಳಿದ ಎರಡುವರೆ ಲಕ್ಷ ಮಕ್ಕಳ ಗತಿ ಏನು? ಎಂದರು.
 ಶಿಕ್ಷಕರುಗಳ ರಜೆಯನ್ನು ಕಡಿತಗೊಳಿಸಿದೆ. ಶಿಕ್ಷಕರು, ನೌಕರರು, ಅಧಿಕಾರಿಗಳನ್ನು ಕಂಡರೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಗಲ್ಲ. ಏಳನೆ ವೇತನ ಆಯೋಗ ಜಾರಿಗೊಳಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿ ಇದುವರೆವಿಗೂ ಈಡೇರಿಸಿಲ್ಲ. ಸದನದ ಒಳಗೆ ಹೊರಗೆ ಶಿಕ್ಷಕರುಗಳ ಸಮಸ್ಯೆಗಳ ಬಗ್ಗೆ ಕಳೆದ ಇಪ್ಪತ್ತು ವರ್ಷಗಳಿಂದಲೂ ಹೋರಾಟ ಮಾಡಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು.

ನನಗೆ ಹೆಚ್ಚು ಮತ ಹಾಕಿರುವ ಚಿತ್ರದುರ್ಗ ಜಿಲ್ಲೆಯ ಪ್ರಜ್ಞಾವಂತ ಶಿಕ್ಷಕರು ಈ ಬಾರಿಯ ಚುನಾವಣೆಯಲ್ಲಿಯೂ ನನಗೆ ಬಹುಮತ ನೀಡುತ್ತಾರೆಂಬ ವಿಶ್ವಾಸವಿದೆ. ಶಿಕ್ಷಕರುಗಳ ಸಮಸ್ಯೆಯನ್ನು ಹತ್ತಿರದಿಂದ ಕಂಡಿದ್ದೇನೆ. ಶಿಕ್ಷಕರುಗಳ ಪ್ರತಿ ಮನೆ ಮನೆಗೆ ಹೋಗಿ ಮತ ಕೇಳಿ. ಖಾಸಗಿ, ಅನುದಾನಿತ ಶಾಲೆಗಳಿಗೆ ಭೇಟಿ ನೀಡಿ ಈಗಿನಿಂದಲೇ ನನ್ನ ಪರ ಕೆಲಸ ಮಾಡಿ ಎಂದು ವಿನಂತಿಸಿದರು.

ಚಿತ್ರದುರ್ಗದಲ್ಲಿ ೧೪೩೭, ಹಿರಿಯೂರು-೮೩೦, ಚಳ್ಳಕೆರೆ-೯೨೭, ಮೊಳಕಾಲ್ಮುರು-೩೫೧, ಹೊಸದುರ್ಗ-೬೩೦, ಹೊಳಲ್ಕೆರೆ-೪೨೦ ಮತದಾರರಿದ್ದಾರೆ. ಒಟ್ಟು ೨೩೫೧೪ ಮತದಾರರ ಪೈಕಿ ೮೮೯೪ ಮಹಿಳೆಯರು, ೧೪೨೩ ಪುರುಷ ಮತದಾರರಿದ್ದಾರೆ. ತುಮಕೂರಿನಲ್ಲಿ ೭೧೮೦, ಕೋಲಾರ-೪೧೨೬, ದಾವಣಗೆರೆ-೩೮೯೦, ಚಿಕ್ಕಬಳ್ಳಾಪುರದಲ್ಲಿ ೩೭೦೦ ಮತಗಳಿವೆ. ೩೪ ಎಂ.ಎಲ್.ಎ., ಐದು ಎಂ.ಪಿ.ಗಳನ್ನು ಒಳಗೊಂಡಿರುವ ವಿಧಾನ ಪರಿಷತ್ ಕ್ಷೇತ್ರದಲ್ಲಿ ೨೦ ವರ್ಷದಿಂದ ೨೦ ಲಕ್ಷ ಕಿ.ಮೀ. ಸುತ್ತಾಡಿದ್ದೇನೆ. ಎಲ್ಲಾ ಶಿಕ್ಷಕರುಗಳ ಕಷ್ಟ-ಸುಖಕ್ಕೆ ಸ್ಪಂದಿಸುತ್ತಿದ್ದೇನೆ. ಆದ್ದರಿಂದ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಪಕ್ಷಕ್ಕೆ ದ್ರೋಹವೆಸಗಿ ಕಾಂಗ್ರೆಸ್‌ಗೆ ಹೋಗಿರುವವರಿಗೆ ತಕ್ಕ ಪಾಠ ಕಲಿಸಿ ಎಂದು ವಿನಂತಿಸಿದರು.

ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಶಿಕ್ಷಣ ಕ್ಷೇತ್ರ, ಪದವೀಧರ ಕ್ಷೇತ್ರ ಹಿಂದಿನಿಂದಲೂ ಬಿಜೆಪಿಯನ್ನು ಬೆಂಬಲಿಸಿಕೊಂಡು ಬರುತ್ತಿದೆ. ಶಿಕ್ಷಕರು ನೊಂದಾಯಿತ ಶಿಕ್ಷಕರುಗಳು ಮತದಾನ ಮಾಡಬಹುದು. ಆರು ಸ್ಥಾನಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ರಾಷ್ಟ್ರೀಯ ರಾಜ್ಯ ನಾಯಕರುಗಳು ಸೂಚಿಸಿರುವುದರಿಂದ ಕಾರ್ಯಕರ್ತರು ಈಗಿನಿಂದಲೇ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪರ ಪ್ರಚಾರ ಆರಂಭಿಸುವಂತೆ ಹೇಳಿದರು.

ಶಿಕ್ಷಣ ಕ್ಷೇತ್ರದ ಬಗ್ಗೆ ಕಾಂಗ್ರೆಸ್‌ಗೆ ಮೊದಲಿನಿಂದಲೂ ಅಸಡ್ಡೆ ಇದೆ. ಬಿಜೆಪಿ ಅಧಿಕಾರಲ್ಲಿದ್ದಾಗ ಶಿಕ್ಷಣ ಕ್ಷೇತ್ರಕ್ಕೆ ಮುತುವರ್ಜಿ ವಹಿಸಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ಒಂದೂ ಶಾಲೆ ಕಾಲೇಜುಗಳ ಕಟ್ಟಡಗಳನ್ನು ಕಟ್ಟಿಲ್ಲ. ಶಿಕ್ಷಣ ಕ್ಷೇತ್ರದ ಬಗ್ಗೆ ಸಂಪೂರ್ಣ ಜ್ಞಾನವಿರುವ ಶಿಕ್ಷಣ ಪ್ರೇಮಿ ವೈ.ಎ.ನಾರಾಯಣಸ್ವಾಮಿ ಅವರನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲಿಸುವುದು ನಿಮ್ಮ ಜವಾಬ್ದಾರಿ ಎಂದರು.

ಹಠಕ್ಕೆ ಬಿದ್ದು ಕಾಂಗ್ರೆಸ್‌ನಿಂದ ಟಿಕೆಟ್ ತೆಗೆದುಕೊಂಡಿರುವವರನ್ನು ಈ ಚುನಾವಣೆಯಲ್ಲಿ ಸೋಲಿಸಬೇಕಿದೆ. ಜಿಲ್ಲೆಯಲ್ಲಿ ೪೬೧೦ ಮತಗಳಿದ್ದು, ಹತ್ತು ಮತಗಳಿಗೆ ಒಬ್ಬರು ಪ್ರಮುಖರನ್ನು ನೇಮಿಸಿ ಪ್ರಧಾನ ಮಂತ್ರಿ ಮೋದಿಯವರ ಶಿಕ್ಷಣ ನೀತಿಯನ್ನು ಮತದಾರರಿಗೆ ಮನವರಿಕೆ ಮಾಡಿಕೊಡಬೇಕಿದೆ ಎಂದು ಪದಾಧಿಕಾರಿಗಳಲ್ಲಿ ಕೋರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಪ್ರಧಾನ ಕಾರ್ಯದರ್ಶಿ ಸಂಪತ್, ಮಾಜಿ ಶಾಸಕ ತಿಪ್ಪೇಸ್ವಾಮಿ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ್ ಕಾರಜೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪತ್‌ಕುಮಾರ್, ಜಿ.ಪಂ. ಮಾಜಿ ಸದಸ್ಯ ಅಜ್ಜಪ್ಪ ವೇದಿಕೆಯಲ್ಲಿದ್ದರು.

ಡಿ.ಸಿ.ಸಿ. ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮಿಕಾಂತರೆಡ್ಡಿ, ಬಿಜೆಪಿ ಮಹಿಳಾ ಅಧ್ಯಕ್ಷೆ ಶೈಲಜಾರೆಡ್ಡಿ, ರಜನಿ, ಬಸಮ್ಮ, ಶ್ಯಾಮಲ ಶಿವಪ್ರಕಾಶ್, ತಾ.ಪಂ. ಮಾಜಿ ಅಧ್ಯಕ್ಷ ಕಲ್ಲಂ ಸೀತಾರಾಮರೆಡ್ಡಿ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ವಕ್ತಾರ ನಾಗರಾಜ್ ಬೇದ್ರೆ, ಶಂಭು ಸಭೆಯಲ್ಲಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!