ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಷ್ಟಪಟ್ಟು ಮದುವೆಯಾದ ಹುಡುಗ, ಇಷ್ಟದ ಜೀವನ, ಸೋಶಿಯಲ್ ಮೀಡಿಯಾ ಕ್ರೇಝ್, ನೋಡೋಕೆ ಸುಂದರಿ, ಮಾತು ಮಾತಿಗೂ ನನ್ನ ಜೀವನ ಬೆಸ್ಟ್ ಎನ್ನುತ್ತಿದ್ದ ಯುವತಿಯೊಬ್ಬಳು ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಶಿವಮೊಗ್ಗದ ತೀರ್ಥಹಳ್ಳಿ ಆರಗ ಸಮೀಪದ ಗ್ರಾಮದವಳಾದ ಶಮಿತಾಗೆ ಬರೀ 25 ವರ್ಷ. ಮದುವೆಯಾಗಿ ಕೇವಲ ಎಂಟು ತಿಂಗಳಾಗಿತ್ತಷ್ಟೆ. ಶಮಿತಾ ಹಾಗೂ ವಿದ್ಯಾರ್ಥ್ ಪ್ರೀತಿಸಿ, ದೊಡ್ಡವರನ್ನು ಒಪ್ಪಿಸಿ ಅದ್ಧೂರಿಯಾಗಿ ಹಸೆಮಣೆ ಏರಿದ್ದರು.
ವಿದ್ಯಾರ್ಥ್ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ನೈಟ್ ಶಿಫ್ಟ್ ಕೆಲಸವನ್ನು ಮಾಡುತ್ತಿದ್ದ. ಶಮಿತಾ ಅತ್ತೆ ಮಾವ ಹಾಗೂ ಪತಿ ಜೊತೆ ಹಾಯಾಗಿದ್ದಳು. ಶಮಿತಾಗೆ ಕಾಡಿದ್ದು, ಸೈಲೆಂಟ್ ಕಿಲ್ಲರ್ ಡಿಪ್ರೆಶನ್!!
ಹೌದು, ಎಷ್ಟೋ ದಿನಗಳಿಂದ ಶಮಿತಾ ಒಂಟಿತನ ಹಾಗೂ ಖಿನ್ನತೆಯನ್ನು ಅನುಭವಿಸುತ್ತಿದ್ದಳು. ಮೊದಲ ಬಾರಿಗೆ ಇದನ್ನು ನೊಟೀಸ್ ಮಾಡಿದ್ದ ಪತಿ ಆಕೆಯನ್ನು ಮನೋವೈದ್ಯರ ಬಳಿಯೂ ಕರೆದುಕೊಂಡು ಹೋಗಿದ್ದ. ಆದರೆ ಶಮಿತಾ ಕಡೆಗೂ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪತಿ ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ ನಂತರ ಅತ್ತೆ ಮಾವನಿಗೆ ಗುಡ್ ನೈಟ್ ಹೇಳಿ ಉಪ್ಪರಿಗೆ ಮೇಲೆ ಮಲಗಲು ತೆರಳಿದ್ದಳು. ಬೆಳಗ್ಗೆ ಎಷ್ಟು ಸಮಯವಾದ್ರೂ ಬಾಗಿಲು ತೆರೆಯದ ಹಿನ್ನೆಲೆ ಕಿಟಕಿಯಿಂದ ಅತ್ತೆ ಮಾವ ನೋಡಿದ್ದಾರೆ. ಶಮಿತಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸ್ಥಳದಲ್ಲಿ ಡೆತ್‌ನೋಟ್ ಕೂಡ ದೊರಕಿದ್ದು, ಆರೋಗ್ಯ ಸಮಸ್ಯೆ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂದು ಶಮಿತಾ ಬರೆದಿದ್ದಾರೆ. ಥೈರಾಯ್ಡ್ ಸಮಸ್ಯೆಯಿಂದ ಎಲ್ಲಿ ತನಗೆ ಮಕ್ಕಳು ಆಗುವುದಿಲ್ಲವೋ ಎಂದು ಶಮಿತಾ ಹೆದರಿದ್ದಳು ಎನ್ನಲಾಗಿದೆ.
ಜಗತ್ತು ಎಷ್ಟೆಲ್ಲಾ ಮುಂದುವರಿದಿದೆ, ಶಮಿತಾಗೆ ಆತ್ಮಹತ್ಯೆ ಮಾಡಿಕೊಳ್ಳಲು ಅವಳದ್ದೇ ಕಾರಣಗಳಿರಬಹುದು. ಮಾನಸಿಕ ಖಿನ್ನತೆ ಎನಿಸಿದಾಗ ವೈದ್ಯರನ್ನು ಸಂಪರ್ಕಿಸಿ, ಕತ್ತಲಾದ ನಂತರ ಬೆಳಕು ಬರುವುದು ಸಾರ್ವಕಾಲಿಕ ಸತ್ಯ!