ಹೊಸದಿಗಂತ ಡಿಜಿಟಲ್ ಡೆಸ್ಕ್:
22 ವರ್ಷದ ಯುವತಿಯೊಬ್ಬಳು ಬಾಂಗ್ಲಾದೇಶದಿಂದ ಭಾರತದಲ್ಲಿರುವ ತನ್ನ ಗೆಳೆಯನನ್ನು ಮದುವೆಯಾಗಲು ನದಿಯಲ್ಲಿ ಈಜಿಕೊಂಡು ಬಂದಿರುವ ಘಟನೆ ನಡೆದಿದೆ. ಬಾಂಗ್ಲಾದೇಶದ ಯುವತಿ ಕೃಷ್ಣ ಮಂಡಲ್ ಎಂಬುವವರಿಗೆ ಫೇಸ್ ಬುಕ್ ಮೂಲಕ ಕೋಲ್ಕತ್ತಾದ ಅಭಿಕ್ ಮಂಡಲ್ ಎಂಬ ಯುವಕನ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಮದುವೆಯಾಗಲು ನಿಶ್ಚಯ ಮಾಡಿದ್ದರು. ಆದರೆ, ಭಾರತಕ್ಕೆ ಬರಲು ಕೃಷ್ಣ ಮಂಡಲ್ ಅವರ ಬಳಿ ಪಾಸ್ಪೋರ್ಟ್ ಇರದ ಕಾರಣ ದಾರಿ ಕಾಣದೆ ಯುವತಿ ಈ ನಿರ್ಧಾರ ಮಾಡಿದ್ದಾರೆ. ಹೇಗಾದರೂ ಭಾರತದಲ್ಲಿರುವ ತನ್ನ ಪ್ರಿಯಕರನನ್ನು ತಲುಪಲು ಬಯಸಿದ ಕೃಷ್ಣಾ, ಸಬ್ಬರ್ಬನ್ ಅರಣ್ಯವನ್ನು ಪ್ರವೇಶಿಸಿದಳು. ಈ ಕಾಡುಗಳು ರಾಯಲ್ ಬೆಂಗಾಲ್ ಟೈಗರ್ಗಳಿಗೆ ಹೆಸರುವಾಸಿಯಾಗಿದೆ. ಹುಲಿಗಳು ಇರುತ್ತವೆ ಎಂಬ ಭಯವಿಲ್ಲದೆ ಮುಂದೆ ಹೆಜ್ಜೆ ಹಾಕಿದ್ದಾಳೆ.
ಈ ಕಾಡುಗಳ ಮೂಲಕ ನಡೆದು ಮಧ್ಯದಲ್ಲಿರುವ ನದಿಯಲ್ಲಿ ಒಂದು ಗಂಟೆಗಳ ಈಜಿಕೊಂಡು ಬಂದು ಭಾರತ ತಲುಪಿದ್ದಾರೆ. ಇಲ್ಲಿಗೆ ಬಂದ ನಂತರ ಆಕೆ ತನ್ನ ಗೆಳೆಯನನ್ನು ಭೇಟಿಯಾಗಿ, ಕೋಲ್ಕತ್ತಾದ ಕಾಳಿಘಾಟ್ ದೇವಸ್ಥಾನದಲ್ಲಿ ಮೂರು ದಿನಗಳ ಹಿಂದೆ ವಿವಾಹವಾಗಿದ್ದಾರೆ. ಆದರೆ, ಪಾಸ್ಪೋರ್ಟ್ ಇಲ್ಲದೆ ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿದ್ದಕ್ಕಾಗಿ ಭಾರತೀಯ ಅಧಿಕಾರಿಗಳು ಆಕೆಯನ್ನು ವಶಕ್ಕೆ ಪಡೆದು, ಬಾಂಗ್ಲಾದೇಶದ ರಾಯಭಾರಿ ಕಚೇರಿಗೆ ಹಸ್ತಾಂತರ ಮಾಡಿದ್ದಾರೆ. ಈ ಘಟನೆಗೂ ಮುನ್ನ ಇತ್ತೀಚೆಗಷ್ಟೇ ಹದಿನೈದು ವರ್ಷದ ಬಾಲಕನೊಬ್ಬ ಚಾಕಲೇಟ್ ಖರೀದಿಸಲು ಬಾಂಗ್ಲಾದೇಶದಿಂದ ಭಾರತಕ್ಕೆ ಬಂದಿದ್ದ.