ಹೊಸದಿಗಂತ ಡಿಜಿಟಲ್ ಡೆಸ್ಕ್
ಬೆಂಗಳೂರು: ದೇಶದ ಗ್ರಾಮೀಣ ಪ್ರದೇಶಗಳಿಗೆ ಡಿಜಿಟಲ್ ಸೇವೆಗಳನ್ನು ಒದಗಿಸುತ್ತಿರುವ ಕಾಮನ್ ಸರ್ವೀಸ್ ಸೆಂಟರ್‌ಗಳು ಮಹಿಳೆಯರಿಗೆ ಅತ್ಯುತ್ತಮ ಉದ್ಯೋಗಾವಕಾಶ ಒದಗಿಸುತ್ತಿವೆ. ಈ ಮೂಲಕ ಡಿಜಿಟಲ್ ಇಂಡಿಯಾ ಹಾಗೂ ಮಹಿಳಾ ಸಬಲೀಕರಣಕ್ಕೆ ಬಲ ತುಂಬುತ್ತಿವೆ ಎಂದು ಹಿಂದು ಧಾರ್ಮಿಕ ದತ್ತಿ ಹಾಗೂ ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಇಂದು ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತವಾಗಿ ಸಿ.ಎಸ್.ಸಿ. ಇ ಗವರ್ನೆನ್ಸ್ ಆ್ಯಂಡ್ ಸರ್ವೀಸಸ್ ಇಂಡಿಯಾ ವತಿಯಿಂದ ಆಯೋಜಿಸಿದ್ದ ವುಮನ್ ವಿಎಲ್ಇ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಿಎಸ್‌ಸಿ ಕೇಂದ್ರಗಳ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾದ ಕನಸನ್ನು ನನಸು ಮಾಡಲಾಗುತ್ತಿದೆ. ಈ ಕೇಂದ್ರಗಳಲ್ಲಿ ಹೆಚ್ಚು ಜನ ಮಹಿಳೆಯರಿಗೆ ಆದ್ಯತೆಯ ಮೇರೆಗೆ ಉದ್ಯೋಗಾವಕಾಶ ನೀಡಲಾಗುತ್ತಿದೆ. ಈ ಮೂಲಕ ಡಿಜಿಟಲ್ ಯುಗದಲ್ಲೂ ಮಹಿಳಾ ಸಬಲೀಕರಣಕ್ಕೂ ಬಲ ತುಂಬಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕಾಮನ್ ಸರ್ವೀಸ್ ಸೆಂಟರ್‌ಗಳ ಪ್ರಾಮುಖ್ಯತೆಯನ್ನು ನಾವು ಅರಿತುಕೊಂಡಿದ್ದೇವೆ. ಇದನ್ನು ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಅಳವಡಿಸಲಾಗಿದ್ದು ಕೆಲವೇ ದಿನಗಳಲ್ಲಿ 160 ಕ್ಕೂ ಹೆಚ್ಚು ಸಿಎಸ್‌ಸಿ ಕೇಂದ್ರಗಳನ್ನು ಉದ್ಘಾಟಿಸಲಾಗುವುದು ಎಂದು ಹೇಳಿದರು.
ಆದರೆ ಇತ್ತೀಚಿನ ದಿನಗಳಲ್ಲಿ ಸ್ತ್ರೀಯರು ಕೂಡ ಸಾಧನೆಯ ಹಾದಿಯಲ್ಲಿ ಪುರುಷನ ಜೊತೆಯಾಗಿ ಸಾಗುತ್ತಿದ್ದಾರೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ. ಖಾಸಗಿ ಹಾಗೂ ಸರಕಾರಿ ಸೇವೆಗಳನ್ನು ಸಾರ್ವಜನಿಕರಿಗೆ ಮುಟ್ಟಿಸುತ್ತಿರುವ ಸಿ.ಎಸ್.ಸಿ ಇ ಗವರ್ನೆನ್ಸ್ ಆ್ಯಂಡ್ ಸರ್ವೀಸಸ್ ಇಂಡಿಯಾ ವತಿಯಿಂದ ಮಹಿಳಾ ಸಬಲೀಕರಣ, ಸ್ವಾವಲಂಬನೆಗಾಗಿ ಹಮ್ಮಿಕೊಂಡಿರುವ ವುಮನ್ ವಿಎಲ್ಇ ಕಾರ್ಯಾಗಾರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಇ-ಶ್ರಮ್ ಕಾರ್ಡ್ ವಿತರಣೆ ಹಾಗೂ ಸಿ.ಎಸ್.ಸಿ.ಯಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.