ರಾಜ್ಯದ ಉದ್ಯೋಗಸ್ಥ ಮಹಿಳೆಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದ ಮಹಿಳಾ ಉದ್ಯೋಗಿಗಳಿಗೆ ಋತು ಚಕ್ರ ರಜೆ ನೀಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಋತು ಚಕ್ರ ರಜೆ ನೀತಿಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದು, ಮಹಿಳಾ ಉದ್ಯೋಗಿಗಳಿಗೆ ವರ್ಷದಲ್ಲಿ 12 ದಿನ ವೇತನ ಸಹಿತ ರಜೆ ಸಿಗಲಿದೆ.
ಕಾರ್ಮಿಕ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ರಾಜ್ಯ ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಎಂಎನ್‌ಸಿ ಕಂಪನಿಗಳು, ಐಟಿ ಮತ್ತು ಇತರೆ ಖಾಸಗಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ತಿಂಗಳಲ್ಲಿ ಒಂದು ದಿನ ಸಂಬಳ ಸಹಿತ ಋತು ಚಕ್ರ ರಜೆ ನೀಡಲಾಗುತ್ತದೆ. ಯಾವ ದಿನ ರಜೆ ಪಡೆಬೇಕು ಎಂಬುವುದನ್ನು ಹೆಣ್ಣುಮಕ್ಕಳು ತೀರ್ಮಾನ ಮಾಡಬಹುದಾಗಿದೆ.
ಮುಟ್ಟಿನ ಸಮಯದಲ್ಲಿ ವಿಶ್ರಾಂತಿ ಯಾಕೆ ಬೇಕು?
ಮುಟ್ಟಿನ ಸಮಯದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಬೇಕಾಗಲು ಮುಖ್ಯ ಕಾರಣವೆಂದರೆ ಆ ಸಮಯದಲ್ಲಿ ಉಂಟಾಗುವ ದೇಹದ ನೋವು, ಆಯಾಸ ಮತ್ತು ಬದಲಾಗುವ ಹಾರ್ಮೋನುಗಳಿಂದ ಉಂಟಾಗುವ ಅನಾನುಕೂಲತೆ. ಈ ಸಮಯದಲ್ಲಿ ಗರ್ಭಾಶಯವು ಸಂಕೋಚನಗೊಳ್ಳುವುದರಿಂದ ನೋವುಂಟಾಗುತ್ತದೆ ಮತ್ತು ದೇಹವು ಹಾರ್ಮೋನ್ ಬದಲಾವಣೆಗಳನ್ನು ಅನುಭವಿಸುತ್ತದೆ. ಆದ್ದರಿಂದ, ವಿಶ್ರಾಂತಿ ತೆಗೆದುಕೊಳ್ಳುವುದು ದೇಹಕ್ಕೆ ಚೇತರಿಸಿಕೊಳ್ಳಲು ಮತ್ತು ಈ ಪರಿಸ್ಥಿತಿಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಎಂದಿನಂತೆ ಕೆಲಸ ಮಾಡಲು ಆ ದಿನ ಸಾಧ್ಯವಾಗುವುದಿಲ್ಲ. ದೈಹಿಕ ನೋವು, ಮಾನಸಿಕ ತೊಳಲಾಟಗಳು ಹೆಚ್ಚಿರುವುದರಿಂದ ಕೆಲಸ ಮಾಡುವುದು ಕಷ್ಟವೇ. ಈ ಎಲ್ಲ ಕಾರಣಗಳಿಂದ ಮಹಿಳೆಯರಿಗೆ ವಿಶ್ರಾಂತಿ ಅಗತ್ಯ. ಕೆಲವರಿಗೆ ಒಂದು ವಾರಗಟ್ಟಲೆ ರಕ್ತಸ್ರಾವವಾದರೆ, ಹಲವರಿಗೆ ಮೂರರಿಂದ ನಾಲ್ಕು ದಿನ ಮಾತ್ರ ರಕ್ತಸ್ರಾವವಾಗುತ್ತದೆ. ಈ ದಿನಗಳಲ್ಲಿ ಒಂದು ದಿನ ರಜೆ ಸಿಕ್ಕರೆ ಮಹಿಳೆಯರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಉತ್ತಮ ಎನಿಸುತ್ತದೆ.
- ಶಾರೀರಿಕ ನೋವು: ಮುಟ್ಟಿನ ಸಮಯದಲ್ಲಿ ಗರ್ಭಾಶಯದ ಸಂಕೋಚನಗಳಿಂದಾಗಿ ಉಂಟಾಗುವ ಬೆನ್ನು ನೋವು, ಹೊಟ್ಟೆ ನೋವು ಮತ್ತು ಇತರ ನೋವುಗಳನ್ನು ನಿವಾರಿಸಲು ವಿಶ್ರಾಂತಿ ಅಗತ್ಯ.
- ಆಯಾಸ: ದೇಹವು ಹಾರ್ಮೋನ್ ಬದಲಾವಣೆಗಳಿಂದಾಗಿ ಬಳಲುತ್ತದೆ, ಇದರಿಂದಾಗಿ ಹೆಚ್ಚಿನ ಆಯಾಸ ಉಂಟಾಗುತ್ತದೆ. ವಿಶ್ರಾಂತಿ ತೆಗೆದುಕೊಳ್ಳುವುದು ದೇಹಕ್ಕೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.
- ಮಾನಸಿಕ ಆರೋಗ್ಯ: ಮುಟ್ಟಿನ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳು ಮನಸ್ಥಿತಿಯಲ್ಲಿ ಏರಿಳಿತಗಳನ್ನು ಉಂಟುಮಾಡಬಹುದು. ಸಾಕಷ್ಟು ವಿಶ್ರಾಂತಿ ಪಡೆಯುವುದರಿಂದ ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಬಹುದು.
- ರಕ್ತಸ್ರಾವದ ನಿರ್ವಹಣೆ: ಮುಟ್ಟಿನ ಸಮಯದಲ್ಲಿ ಸಾಮಾನ್ಯವಾಗಿ ಯೋನಿಯ ಮೂಲಕ ರಕ್ತ, ಅಂಗಾಂಶಗಳು ಮತ್ತು ಇತರ ವಸ್ತುಗಳು ಹೊರಹಾಕಲ್ಪಡುತ್ತವೆ. ಈ ಸಮಯದಲ್ಲಿ ದೇಹಕ್ಕೆ ವಿಶ್ರಾಂತಿ ನೀಡುವುದು ರಕ್ತಸ್ರಾವವನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.