ದ.ಕ.ದಲ್ಲಿ ಮಹಿಳಾ ಮತದಾರರೇ ಅಧಿಕ: ಎಂಟು ಕ್ಷೇತ್ರಗಳಿಗೂ ಚುನಾವಣಾ ಅಧಿಕಾರಿಗಳ ನೇಮಕ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಿಗೆ ಏ.13ರಂದು ಚುನಾವಣಾ ಅಧಿಸೂಚನೆ ಹೊರಡಿಸಲಾಗುವುದು. ಏ.20ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ. ಮರುದಿನ ನಾಮಪತ್ರ ಪರಿಶೀಲನೆ. ಏ.24ರಂದು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನವಾಗಿದೆ. ಮೇ 10ರಂದು ಚುನಾವಣೆ. ಮೇ 13ರಂದು ಮತ ಎಣಿಕೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರವಿಕುಮಾರ್ ಎಂ.ಆರ್ ತಿಳಿಸಿದ್ದಾರೆ.

ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ , ಚುನಾವಣೆಗೆ ಆಗಿರುವ ಸಿದ್ಧತೆಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
8 ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಬೆಳ್ತಂಗಡಿಗೆ ಎಚ್.ಆರ್.ಯೋಗೀಶ್ (9448416618), ಮೂಡಬಿದ್ರೆಗೆ ಮಹೇಶ್ಚಂದ್ರ ಕೆ (9483856497), ಮಂಗಳೂರು ನಗರ ಉತ್ತರಕ್ಕೆ ಅಭಿಷೇಕ್ ವಿ (8123915218), ಮಂಗಳೂರು ನಗರ ದಕ್ಷಿಣ ಕೆಂಪೇಗೌಡ (8277931060), ಮಂಗಳೂರು ರಾಜು ಕೆ (9972356999), ಬಂಟ್ವಾಳಕ್ಕೆ ಅಬಿದ್ ಗಡ್ಯಾಲ್ (9008690039), ಪುತ್ತೂರಿಗೆ ಗಿರೀಶ್ ನಂದನ್ (9731598154) ಮತ್ತು ಸುಳ್ಯಕ್ಕೆ ಅರುಣ್‌ಕುಮಾರ್ ಸಂಗಾವಿ (9916326521) ಚುನವಾಣಾ ಅಧಿಕಾರಿಗಳಾಗಿರುತ್ತಾರೆ ಎಂದರು.

ಬೆಳ್ತಂಗಡಿಯ ತಾಲೂಕು ಆಡಳಿತ ಸೌಧ, ಮೂಡಬಿದ್ರೆಯ ಆಡಳಿತ ಸೌಧ, ಮಂಗಳೂರು ತಾಲೂಕು ಆಡಳಿತ ಸೌಧ, ಮಹಾ ನಗರಪಾಲಿಕೆಯ ಸಮಿತಿ ಸಭಾಂಗಣ, ಮಂಗಳೂರು ತಾಲೂಕು ಆಡಳಿತ ಸೌಧದ ಸಹಾಯಕ ಆಯುಕ್ತರ ಕಚೇರಿ, ಬಂಟ್ವಾಳ ಆಡಳಿತ ಸೌಧ, ಪುತ್ತೂರು ಆಡಳಿತ ಸೌಧ ಮತ್ತು ಸುಳ್ಯ ಆಡಳಿತ ಸೌಧದಲ್ಲಿ ನಾಮಪತ್ರಗಳನ್ನು ಸ್ವೀಕರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ವಿವರಿಸಿದರು.

ಜಿಲ್ಲೆಯಲ್ಲಿ ಒಟ್ಟು 17,58,647 ಮತದಾರರಿದ್ದಾರೆ. ಅವರ ಪೈಕಿ 8,98,176 ಮಹಿಳೆಯರು ಮತ್ತು 8,60,396 ಪುರುಷರು. 75 ಮಂದಿ ತೃತೀಯ ಲಿಂಗಿಗಳಿದ್ದಾರೆ. 1819 ವರ್ಷ ಪ್ರಾಯದ 33,577 ಯುವ ಮತದಾರರಿದ್ದಾರೆ. 80 ವರ್ಷ ದಾಟಿದ 46,927 ಮತದಾರರು ಮತ್ತು 14,007 ವಿಶೇಷ ಚೇತನ ಮತದಾರರಿದ್ದಾರೆ. ಇವರಿಗೆ ನಮೂನೆ 12 ಡಿ ನೀಡಿ ಪೋಸ್ಟಲ್ ಬ್ಯಾಲೆಟ್‌ನಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗುವುದು. ಇದು ಐಚ್ಛಿಕವಾಗಿದ್ದು, ಮತಗಟ್ಟೆಗೆ ಬಂದು ಮತದಾನ ಮಾಡಲು ಇಚ್ಚಿಸುವವರಿಗೆ ನಮೂನೆ 12 ಡಿ ನೀಡುವುದಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮೇ 5ರ ಒಳಗಾಗಿ ಈ ಮತದಾರರನ್ನು ತಲುಪಲಾಗುವುದು. ನಮೂನೆ 12ನ್ನು ಒಪ್ಪಿಕೊಳ್ಳುವ ಮತದಾರರು ಮನೆಯಲ್ಲಿಯೇ ಗುಪ್ತವಾಗಿ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗುವುದು. ಅದಕ್ಕಾಗಿ ಪ್ರತಿಯೊಂದು ಮತಗಟ್ಟೆಗಳಲ್ಲೂ ಚುನಾವಣಾ ತಂಡ ಇರಲಿದೆ ಎಂದು ಹೇಳಿದ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲಾ ಮಟ್ಟದಲ್ಲಿ ನೀತಿ ಸಂಹಿತೆ ನೋಡೆಲ್ ಅಧಿಕಾರಿಯಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕುಮಾರ್ ಕರ್ತವ್ಯ ನಿರ್ವಹಿಸುವರು. ಎಂಟು ವಿಧಾನ ಸಭಾ ಕ್ಷೇತ್ರಗಳಿಗೂ ನೋಡೆಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದರು.

1,860 ಮತಗಟ್ಟೆಗಳಿವೆ

ಜಿಲ್ಲೆಯಲ್ಲಿ 1,860 ಮತಗಟ್ಟೆಗಳಿವೆ. ಬೆಳ್ತಂಗಡಿಯಲ್ಲಿ 241, ಮೂಡಬಿದ್ರೆಯಲ್ಲಿ 221, ಮಂಗಳೂರು ನಗರ ಉತ್ತರದಲ್ಲಿ 244, ಮಂಗಳೂರು ನಗರ ದಕ್ಷಿಣದಲ್ಲಿ 244, ಮಂಗಳೂರಿನಲ್ಲಿ 210, ಬಂಟ್ವಾಳದಲ್ಲಿ249, ಪುತ್ತೂರಿನಲ್ಲಿ 220 ಹಾಗೂ ಸುಳ್ಯದಲ್ಲಿ 231 ಮತಗಟ್ಟೆಗಳಿವೆ.

ಹತ್ತು ಅಂತಾರಾಜ್ಯ ಪೊಲೀಸ್ ತಪಾಸಣಾ ಠಾಣೆ ನಿರ್ಮಾಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹತ್ತು ಅಂತಾರಾಜ್ಯ ಪೊಲೀಸ್ ತಪಾಸಣಾ ಠಾಣೆಗಳನ್ನು ನಿರ್ಮಿಸಲಾಗಿದೆ. ಎಂಟು ಅಂತರ್ ಜಿಲ್ಲಾ ತಪಾಸಣಾ ಠಾಣೆಗಳಿವೆ. ಸ್ಥಳೀಯ 9 ಹೀಗೆ ಒಟ್ಟು 27 ಚೆಕ್ ಪೋಸ್ಟ್‌ಗಳಿವೆ. ಅಲ್ಲಿ ದಿನ ಪೂರ್ತಿ ತಪಾಸಣೆ ನಡೆಯುತ್ತದೆ.

ಪ್ರಚಾರ ವಸ್ತುಗಳನ್ನು ತೆರವು
ಚುನಾವಣೆಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಇರುವ 507 ಗೋಡೆ ಬರಹ, 1,421 ಭಿತ್ತಿಪತ್ರಗಳು, 1,746 ಪೋಸ್ಟರ್‌ಗಳ ಸಹಿತ 4,308 ಪ್ರಚಾರ ವಸ್ತುಗಳನ್ನು ತೆರವು ಮಾಡಲಾಗಿದೆ. ಖಾಸಗಿ ಸ್ಥಳಗಳಲ್ಲಿ ಇದ್ದ 494 ಪ್ರಚಾರ ವಸ್ತುಗಳನ್ನು ತೆರವು ಮಾಡಲಾಗಿದೆ.

ಬಂದೂಕು ಹೊಂದಿರುವವರು ಅವುಗಳನ್ನು ಠೇವಣಿ ಇಡುವಂತೆ ಸೂಚನೆ 

ಮಂಗಳೂರು ಪೊಲೀಸ್ ಕಮಿಷನರೇಟ್ ಹಾಗೂ ಎಸ್ಪಿ ವ್ಯಾಪ್ತಿಯಲ್ಲಿ ಬೆಳೆ ಸಂರಕ್ಷಣೆ ಮತ್ತು ಆತ್ಮರಕ್ಷಣೆಗಾಗಿ ಬಂದೂಕು ಹೊಂದಿರುವವರು ಅವುಗಳನ್ನು ಠೇವಣಿ ಇಡುವಂತೆ ಸೂಚಿಸಲಾಗಿದೆ. ಕೆಲವರು ಠೇವಣಿಯಿಂದ ವಿನಾಯಿತಿ ನೀಡಬೇಕು ಎಂದು ಕೋರಿದ್ದಾರೆ. ಅದಕ್ಕಾಗಿ ಉಪ ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿ ಸಭೆ ನಡೆಸಿ ನಿರ್ಧಾರಕ್ಕೆ ಬಂದು ಅದನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿ ಕೊಡಲಿದೆ. ಆಯೋಗದ ನಿರ್ದೇಶದಂತೆ ಮುಂದಿನ ನಡೆ ಇರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!