May 15, 2026
Friday, May 15, 2026
spot_img

ಕಾಂಗ್ರೆಸ್‌ಗೆ ಮಹಿಳೆಯರೇ ಪಾಠ ಕಲಿಸಲಿದ್ದಾರೆ: ವಿಪಕ್ಷಗಳ ವಿರುದ್ಧ ರೂಪಾಲಿ ನಾಯ್ಕ ಕಿಡಿ

ಹೊಸದಿಗಂತ ಕಾರವಾರ:

ಬಹುಕಾಲದ ಕನಸಾಗಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಸೋಲಿಸುವ ಮೂಲಕ ಪ್ರತಿಪಕ್ಷಗಳು ತಮ್ಮ ಮಹಿಳಾ ವಿರೋಧಿ ಧೋರಣೆಯನ್ನು ಪ್ರದರ್ಶಿಸಿವೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ-ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.

“ಕಾಂಗ್ರೆಸ್ ದಶಕಗಳಿಂದ ಮಹಿಳಾ ಮೀಸಲಾತಿ ತರುವಲ್ಲಿ ವಿಫಲವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಶಾಸನಸಭೆಗಳಲ್ಲಿ ಮಹಿಳೆಯರಿಗೆ ಶೇ. 33 ರಷ್ಟು ಮೀಸಲಾತಿ ನೀಡುವ ಐತಿಹಾಸಿಕ ‘ನಾರಿ ಶಕ್ತಿ ವಂದನ್’ ವಿಧೇಯಕವನ್ನು ಮಂಡಿಸಿದರು. ಇದನ್ನು ಸ್ವಾಗತಿಸುವ ಬದಲು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ವಿರುದ್ಧವಾಗಿ ಮತ ಚಲಾಯಿಸಿವೆ. ಈ ಮೂಲಕ ಮಹಿಳೆಯರ ಬಗ್ಗೆ ಅವರಿಗಿರುವ ಕಾಳಜಿ ಎಂತಹುದು ಎಂಬುದು ಜಗತ್ತಿಗೆ ತಿಳಿಯುವಂತಾಗಿದೆ,” ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೇರೆ ಸಂದರ್ಭಗಳಲ್ಲಿ ಮಹಿಳಾ ಪರ ಎಂದು ನಾಟಕವಾಡುವ ಕಾಂಗ್ರೆಸ್‌ನ ನೈಜ ಬಣ್ಣ ಈಗ ಬಯಲಾಗಿದೆ. ಈ ದ್ರೋಹಕ್ಕೆ ಮುಂಬರುವ ಚುನಾವಣೆಗಳಲ್ಲಿ ದೇಶದ ಮಹಿಳೆಯರೇ ಕಾಂಗ್ರೆಸ್‌ಗೆ ಸೂಕ್ತ ಪಾಠ ಕಲಿಸಲಿದ್ದಾರೆ. ಕಾಂಗ್ರೆಸ್‌ನಲ್ಲಿರುವ ಮಹಿಳಾ ನಾಯಕಿಯರೇ ಇಂದು ಪಕ್ಷದ ನಿಲುವಿನಿಂದಾಗಿ ಕೈಕಟ್ಟಿಕೊಂಡಂತಾಗಿದೆ ಎಂದು ಅವರು ಲೇವಡಿ ಮಾಡಿದರು.

ಮಹಿಳೆಯರು ರಾಜಕೀಯವಾಗಿ ಮುಂಚೂಣಿಗೆ ಬರುವುದನ್ನು ಸಹಿಸದ ಪ್ರತಿಪಕ್ಷಗಳು ಕೇವಲ ರಾಜಕೀಯ ಲಾಭಕ್ಕಾಗಿ ಮಸೂದೆಯನ್ನು ವಿರೋಧಿಸಿವೆ. ಇದು ಕೇವಲ ಬಿಜೆಪಿಗೆ ಮಾಡಿದ ಸೋಲಲ್ಲ, ಬದಲಾಗಿ ಇಡೀ ದೇಶದ ಮಹಿಳಾ ಕುಲಕ್ಕೆ ಮಾಡಿದ ದ್ರೋಹವಾಗಿದೆ. ಮಹಿಳೆಯರಿಗೆ ನ್ಯಾಯ ಸಿಗುವವರೆಗೆ ಮತ್ತು ಈ ಐತಿಹಾಸಿಕ ಮಸೂದೆಯ ಅನುಷ್ಠಾನಕ್ಕಾಗಿ ನಾವು ನಿರಂತರವಾಗಿ ಹೋರಾಟ ನಡೆಸುತ್ತೇವೆ ಎಂದು ರೂಪಾಲಿ ನಾಯ್ಕ ಘೋಷಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !