ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳಾ ಮೀಸಲಾತಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಟೀಕೆ ಮಾಡುತ್ತಿರುವ ಬಿಜೆಪಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. “ಮಹಿಳಾ ಮೀಸಲಾತಿ ಎಂಬುದು ಕೇವಲ ಬಿಜೆಪಿಯ ಆಸ್ತಿಯಲ್ಲ” ಎಂದು ಹೇಳುವ ಮೂಲಕ ಅವರು ಕೇಸರಿ ಪಡೆಯ ವಿರುದ್ಧ ಹರಿಹಾಯ್ದಿದ್ದಾರೆ.
ಬಿಜೆಪಿಯ ನಡೆಗಳನ್ನು ವಿಮರ್ಶಿಸಿದ ಡಿಕೆಶಿ, “ಸೋಲುವ ಭಯದಿಂದಲೇ ಅವರು ಈ ಬಿಲ್ ತಂದಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವೆಲ್ಲರೂ ಪ್ರತಿನಿಧಿಗಳಲ್ಲವೇ? ಪ್ರತಿಪಕ್ಷದ 240 ಸಂಸದರನ್ನು ವಿಶ್ವಾಸಕ್ಕೆ ಪಡೆಯದೆ, ಚರ್ಚೆ ನಡೆಸದೆ ಏಕಪಕ್ಷೀಯವಾಗಿ ತೀರ್ಮಾನ ಕೈಗೊಂಡಿದ್ದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ಕ್ಷೇತ್ರಗಳ ಪುನರ್ವಿಂಗಡಣೆ ಕುರಿತು ಗಂಭೀರ ಆರೋಪ ಮಾಡಿದ ಅವರು, “ಉತ್ತರ ಭಾರತದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಹೆಚ್ಚಿಸಿ, ದಕ್ಷಿಣ ಭಾರತದ ಪ್ರಾತಿನಿಧ್ಯವನ್ನು ಕಡಿಮೆ ಮಾಡುವ ಹುನ್ನಾರ ನಡೆಯುತ್ತಿದೆ. ನಮ್ಮನ್ನು ಕರೆಯದೆ ನಡೆಸುವ ಇಂತಹ ತಂತ್ರಗಳನ್ನು ಯಾರೂ ಸಹಿಸಲು ಸಾಧ್ಯವಿಲ್ಲ” ಎಂದು ಎಚ್ಚರಿಸಿದರು.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ದಕ್ಷಿಣ ಭಾರತದ ಸಂಸದರು ನಡೆಸಿದ ನಿರಂತರ ಪ್ರತಿಭಟನೆಯ ಫಲವಾಗಿ ಇಂದು ನಮಗೆ ಜಯ ಸಿಕ್ಕಿದೆ. “ನಾವು ಅವಮಾನಕ್ಕೆ ಒಳಗಾಗಿಲ್ಲ, ಬದಲಾಗಿ ಮಹಿಳೆಯರ ಪರವಾಗಿ ನಿಂತಿರುವುದು ಕಾಂಗ್ರೆಸ್ ಮತ್ತು ಇಂಡಿಯಾ ಒಕ್ಕೂಟ ಮಾತ್ರ” ಎಂದು ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.



