ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಡಿ.ಗುಕೇಶ್ ಅವರು ಡಿಸೆಂಬರ್ 12 ರ ಶುಕ್ರವಾರದಂದು ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ವಿಶ್ವ ಚೆಸ್ ಲೋಕಕ್ಕೆ ಸಾಮ್ರಾಟನಾಗಿದ್ದಾರೆ. ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸಿದ 18 ವರ್ಷದ ಗುಕೇಶ್ ಈ ಸಾಧನೆ ಮಾಡಿದ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎನಿಸಿಕೊಂಡಿದ್ದಾರೆ.
ಆದರೆ ಇದೀಗ ಗುಕೇಶ್ ಮೇಲೆ ಫಿಕ್ಸಿಂಗ್ ಆರೋಪ ಹಾಕಲಾಗಿದೆ.ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷ ಆಂಡ್ರೆ ಫಿಲಾಟೆವ್ ಅವರು ಲಿರೆನ್ ಉದ್ದೇಶಪೂರ್ವಕವಾಗಿ ಫೈನಲ್ ಪಂದ್ಯದಲ್ಲಿ ಸೋತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ ಅಂತರಾಷ್ಟ್ರೀಯ ಚೆಸ್ ಫೆಡರೇಶನ್ (FIDE) ಈ ಬಗ್ಗೆ ತನಿಖೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಡಿಂಗ್ ಲಿರೆನ್ ಅವರ ಉದ್ದೇಶಪೂರ್ವಕ ಸೋಲಿನ ಬಗ್ಗೆ ತನಿಖೆ ನಡೆಸಬೇಕೆಂದು ರಷ್ಯಾದ ಚೆಸ್ ಫೆಡರೇಶನ್ ಅಧ್ಯಕ್ಷ ಆಂಡ್ರೆ ಫಿಲಾಟೆವ್ ಒತ್ತಾಯಿಸಿದ್ದಾರೆ. ಆಂಡ್ರೆ ಫಿಲಾಟೆವ್ ಮಾಡಿರುವ ಆರೋಪವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಉಕ್ರೇನಿಯನ್ ಚೆಸ್ ಕೋಚ್ ಪೀಟರ್ ಹೆನ್ ನೀಲ್ಸನ್ ಹಂಚಿಕೊಂಡಿದ್ದಾರೆ. ಅದರಲ್ಲಿರುವುದೇನೆಂದರೆ, ‘ವಿಶ್ವ ಚೆಸ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಫಲಿತಾಂಶದಿಂದ ವೃತ್ತಿಪರರು ಮತ್ತು ಚೆಸ್ ಅಭಿಮಾನಿಗಳು ತೃಪ್ತರಾಗಿಲ್ಲ. ಗುಕೇಶ್ ವಿರುದ್ಧದ ಕೊನೆಯ ಗೇಮ್ನಲ್ಲಿ ಡಿಂಗ್ ಲಿರೆನ್ ಮಾಡಿದ ಕೆಲವು ಮೂವ್ಗಳು ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಹೀಗಾಗಿ FIDE ಅದನ್ನು ಪ್ರತ್ಯೇಕವಾಗಿ ತೆಗೆದುಕೊಂಡು ತನಿಖೆ ನಡೆಸಬೇಕು. ಚೀನಾದ ಆಟಗಾರ ಉದ್ದೇಶಪೂರ್ವಕವಾಗಿ ಪಂದ್ಯವನ್ನು ಸೋತಿರುವಂತೆ ತೋರುತ್ತಿದೆ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಆರೋಪಿಸಿದ್ದಾರೆ.