ವಿಶ್ವ ಹಿಂದೂ ಪರಿಷದ್ ನಿಂದ ಕೊಡಗಿನಲ್ಲಿ ನಡೆಯಲಿದೆ ‘ಹಿಂದೂ ಹಿತಚಿಂತಕ’ ಅಭಿಯಾನ

ಹೊಸ ದಿಗಂತ ವರದಿ, ಮಡಿಕೇರಿ:

ವಿಶ್ವ ಹಿಂದೂ ಪರಿಷದ್ ವತಿಯಿಂದ ವಿಶ್ವ ವ್ಯಾಪಿ ನ.6 ರಿಂದ 20 ರವರೆಗೆ ಹಿಂದೂ ಹಿತಚಿಂತಕ ಅಭಿಯಾನ ನಡೆಯಲಿದೆ ಎಂದು ಪರಿಷದ್’ನ ಜಿಲ್ಲಾಧ್ಯಕ್ಷ ಪಿ.ಕೃಷ್ಣಮೂರ್ತಿ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಮೂರು ವರ್ಷಕ್ಕೊಮ್ಮೆ ಹಿತಚಿಂತಕ ಅಭಿಯಾನ ನಡೆಯುತ್ತಿದ್ದು, ಮನೆ ಮನೆಗೆ ಕಾರ್ಯಕರ್ತರು ತೆರಳಲಿದ್ದಾರೆ. ಹಿಂದೂ ಹಿತಚಿಂತಕರು ರೂ.20 ನೀಡಿ ಹೆಸರು ನೋದಾಯಿಸಿಕೊಳ್ಳಬಹುದಾಗಿದೆ. ಕೊಡಗು ಜಿಲ್ಲೆಯಲ್ಲಿ ನ.6 ಮತ್ತು 13 ರಂದು ಅಭಿಯಾನ ನಡೆಯಲಿದೆ ಎಂದರು.

ಇದೊಂದು ಮಹಾ ಅಭಿಯಾನವಾಗಿದ್ದು, ಜಿಲ್ಲೆಯ ಪ್ರತಿ ತಾಲೂಕಿನ ಗ್ರಾಮ ಗ್ರಾಮಗಳಿಗೆ ವಿಹೆಚ್‍ಪಿ ಕಾರ್ಯಕರ್ತರು ಭೇಟಿ ನೀಡಿ ಅಭಿಯಾನದ ಯಶಸ್ಸಿಗಾಗಿ ಶ್ರಮಿಸಲಿದ್ದಾರೆ. ಕೊಡಗು ಜಿಲ್ಲಾ ವಿಭಾಗದಲ್ಲಿ ಸುಮಾರು 25 ಸಾವಿರ ಮಂದಿ ಹೆಸರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವ ಹಿಂದೂ ಪರಿಷದ್ 1964ರ ಶ್ರೀಕೃಷ್ಣ ಜನ್ಮಾಷ್ಟಮಿ ದಿನ ‘ಸಾಂದೀಪನಿ ಆಶ್ರಮ’ ಮುಂಬೈಯಲ್ಲಿ ಪ್ರಾರಂಭವಾಯಿತು. ಅಂದಿನ ಮೈಸೂರಿನ ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ವಿ.ಹಿಂ.ಪ.ದ ಮೊದಲ ಅಧ್ಯಕ್ಷರಾಗಿದ್ದರು. ಹಿಂದೂ ಧರ್ಮ, ಸಂಸ್ಕೃತಿ ಮತ್ತು ಅದರ ಶ್ರೇಷ್ಠತೆಗಳ ಸಂರಕ್ಷಣೆ ಮತ್ತು ಪ್ರಚಾರ ಪ್ರಸಾರ. ಹಿಂದೂ ಸಮಾಜದಲ್ಲಿರುವ ಮೇಲು-ಕೀಳು, ಅಸ್ಪೃಶ್ಯತೆ ಭಾವನೆಗಳನ್ನು ತೊಲಗಿಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು. ಹಿಂದೂಗಳು ಅನ್ಯಮತಗಳಿಗೆ ಮತಾಂತರ ಆಗುವುದನ್ನು ತಡೆಯುವುದು ಮತ್ತು ಆಮಿಷ, ಬಲತ್ಕಾರದಿಂದ ಮತಾಂತರ ಆದ ಹಿಂದುಗಳನ್ನು ಮರಳಿ ಮಾತೃ ಧರ್ಮಕ್ಕೆ ತರುವುದು. ಗೋರಕ್ಷಣೆ ಮಾಡುವುದು, ಗೋ ಆಧಾರಿತ ಕೃಷಿಯನ್ನು ಪ್ರೋತ್ಸಾಹಿಸುವುದು ವಿಶ್ವ ಹಿಂದೂ ಪರಿಷದ್’ನ ಗುರಿಯಾಗಿದೆ ಎಂದು ಕೃಷ್ಣಮೂರ್ತಿ ತಿಳಿಸಿದರು.
ಜಿಲ್ಲೆಯ ತೋರ ಗ್ರಾಮದಲ್ಲಿ ಶ್ರೀಕಾವೇರಿ ಗೋಶಾಲೆ ವಿಹೆಚ್‍ಪಿ ನೇತೃತ್ವದಲ್ಲಿ ನಡೆಯುತ್ತಿದ್ದು, ಗೋವುಗಳಿಗೆ ಮೇವು ದಾನ ಮಾಡಬಹುದು ಅಥವಾ ದತ್ತು ಪಡೆಯಬಹುದೆಂದು ಅವರು ಇದೇ ಸಂದರ್ಭ ಮನವಿ ಮಾಡಿದರು.

ಕಾವೇರಿ ಆರತಿ: ಮಠ, ಮಂದಿರ ಪ್ರಮುಖ್ ಡಾ.ಮಹಾಬಲೇಶ್ವರ ಭಟ್ ಮಾತನಾಡಿ, ವಿಶ್ವ ಹಿಂದೂ ಪರಿಷದ್ ವತಿಯಿಂದ ಕಾರ್ತಿಕ ಮಾಸದ ಹುಣ್ಣಿಮೆಯ ಶುಕ್ಲ ಪಕ್ಷದ ಪೂಣಿಮೆ ಅಂಗವಾಗಿ ಭಾಗಮಂಡಲದ ಕಾವೇರಿ, ಕನ್ನಿಕೆ ಹಾಗೂ ಸುಜ್ಯೋತಿ ನದಿಗಳ ತ್ರಿವೇಣಿ ಸಂಗಮದಲ್ಲಿ ನ.8 ರಂದು ಸಂಜೆ 5.30 ರಿಂದ ವೇದ ಘೋಷ, ಭಜನೆ ಹಾಗೂ ಕಾವೇರಿ ಮಾತೆಯ ಅರ್ಚನೆಯೊಂದಿಗೆ ಕಾವೇರಿ ಆರತಿಯನ್ನು ಬೆಳಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಉತ್ತರ ಭಾರತದ ಹರಿದ್ವಾರ, ರಿಷಿಕೇಶ, ಕಾಶಿಯಲ್ಲಿ ಗಂಗಾಮಾತೆಗೆ ಪ್ರತಿನಿತ್ಯವೂ ಸಂಜೆ ಆರತಿ ಮಾಡುವುದನ್ನು ಪವಿತ್ರ ಪದ್ಧತಿಯನ್ನಾಗಿ ರೂಢಿಸಿಕೊಂಡು ಬರಲಾಗಿದೆ. ದಕ್ಷಿಣ ಭಾರತದ ಕಾವೇರಿ ಮಾತೆಗೂ ಅಷ್ಟೇ ಪಾವಿತ್ರ್ಯತೆ ಇರುವುದರಿಂದ ವಿಶೇಷ ಆರತಿಯನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿಶೇಷ ದಿಕ್ಸೂಚಿ ಭಾಷಣಕಾರರಾಗಿ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿದ್ದಾರೆ ಎಂದು ಡಾ.ಮಹಾಬಲೇಶ್ವರ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷದ್ ಕಾರ್ಯಾಧ್ಯಕ್ಷ ಎಸ್.ಸುರೇಶ್ ಮುತ್ತಪ್ಪ, ಕಾರ್ಯದರ್ಶಿ ಪುದಿಯೊಕ್ಕಡ ರಮೇಶ್, ಹಾಗೂ ಕಾರ್ಯಕ್ರಮದ ಸಂಯೋಜಕ ಆರ್.ಮುನಿಕೃಷ್ಣ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!