ಸಮಯ ಎಷ್ಟು ಬದಲಾಗಿದ್ರೂ, ಫ್ಯಾಷನ್ ಟ್ರೆಂಡ್‌ಗಳು ಎಷ್ಟೇ ಬಂದರೂ, ಭಾರತೀಯ ಮಹಿಳೆಯ ಗುರುತಾಗಿ ನಿಲ್ಲುವ ಉಡುಗೆ ಅಂದ್ರೆ ಅದು ಸೀರೆ. ಇದು ಕೇವಲ ಉಡುಪಲ್ಲ, ತಲೆಮಾರುಗಳಿಂದ ತಲೆಮಾರಿಗೆ ಹರಿದು ಬಂದ ಸಂಸ್ಕೃತಿ, ಸಂಪ್ರದಾಯ ಮತ್ತು ಸೌಂದರ್ಯದ ಸಂಕೇತ. ಇದೇ ಸೀರೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 21 ರಂದು ‘ವಿಶ್ವ ಸೀರೆ ದಿನ’ವನ್ನು ಆಚರಿಸಲಾಗುತ್ತದೆ. ಈ ದಿನ ಭಾರತೀಯ ಪರಂಪರೆಯ ಸೊಬಗನ್ನು ಜಗತ್ತಿಗೆ ಪರಿಚಯಿಸುವ ಮಹತ್ವದ ವೇದಿಕೆಯಾಗಿದೆ.
ವಿಶ್ವ ಸೀರೆ ದಿನದ ಇತಿಹಾಸ:
ವಿಶ್ವ ಸೀರೆ ದಿನವನ್ನು ಪ್ರತಿವರ್ಷ ಡಿಸೆಂಬರ್ 21ರಂದು ಆಚರಿಸಲಾಗುತ್ತದೆ. ಸಾಮಾಜಿಕ ಕಾರ್ಯಕರ್ತರಾದ ಸಿಂಧೂರ ಕವಿತಿ ಮತ್ತು ನಿಸ್ತುಲಾ ಹೆಬ್ಬಾರ್ ಅವರು 2020 ರಲ್ಲಿ ಸ್ಥಾಪಿಸಿದ ವಿಶ್ವ ಸೀರೆ ದಿನವನ್ನು ಸೀರೆಗಳ ಸಂಕೀರ್ಣ ಕರಕುಶಲತೆ ಮತ್ತು ಶ್ರೀಮಂತ ಪರಂಪರೆಯನ್ನು ಆಚರಿಸಲು ಒಂದು ವೇದಿಕೆಯಾಗಿ ಸ್ಥಾಪಿಸಲಾಯಿತು. ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಒಂದು ಸಣ್ಣ ಅಭಿಯಾನವೇ ಇಂದು ಜಾಗತಿಕ ಆಚರಣೆಯಾಗಿ ಬೆಳೆದಿದೆ. ಭಾರತೀಯ ಸೀರೆಗಳ ಮಹತ್ವ, ಕೈಮಗ್ಗದ ಮೌಲ್ಯ ಮತ್ತು ನೇಯ್ಗೆ ಕಾರ್ಮಿಕರ ಬದುಕಿಗೆ ಗೌರವ ತರುವ ಉದ್ದೇಶದಿಂದ ಈ ದಿನವನ್ನು ರೂಪಿಸಲಾಯಿತು.
ಭಾರತೀಯ ಮಹಿಳೆಯರು ವಿದೇಶಗಳಲ್ಲೂ ಸೀರೆ ಧರಿಸಿ ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸಿದಾಗ, ಈ ದಿನಕ್ಕೆ ಜಾಗತಿಕ ಗುರುತು ದೊರಕಿತು. ಕಾಲಕ್ರಮೇಣ ಫ್ಯಾಷನ್ ವಲಯ, ಸಂಸ್ಕೃತಿ ಸಂಘಟನೆಗಳು ಮತ್ತು ಮಹಿಳಾ ಸಮುದಾಯಗಳು ವಿಶ್ವ ಸೀರೆ ದಿನವನ್ನು ವಿಶಿಷ್ಟವಾಗಿ ಆಚರಿಸಲು ಆರಂಭಿಸಿದವು.
ವಿಶ್ವ ಸೀರೆ ದಿನವು ಭಾರತೀಯ ಪರಂಪರೆಯ ವೈವಿಧ್ಯತೆಯನ್ನು ಸಂಭ್ರಮಿಸುವ ದಿನವಾಗಿದೆ. ಕಂಚಿಪುರಂ, ಬನಾರಸಿ, ಇಳಕಲ್, ಮೈಸೂರು ಸೀರೆ, ಪಟ್ಟೆ ಸೀರೆಗಳಂತಹ ಅನೇಕ ಶೈಲಿಗಳು ಈ ದಿನದ ಮೂಲಕ ಮತ್ತೆ ನೆನಪಿಗೆ ಬರುತ್ತವೆ. ಕೈಮಗ್ಗ ಮತ್ತು ನೇಯ್ಗೆ ಉದ್ಯಮದ ಮೇಲೆ ಬೆಳಕು ಚೆಲ್ಲುವ ಮೂಲಕ, ನೇಯ್ಗೆ ಕಾರ್ಮಿಕರ ಶ್ರಮಕ್ಕೆ ಗೌರವ ನೀಡಲಾಗುತ್ತದೆ. ಯುವ ಪೀಳಿಗೆಯಲ್ಲೂ ಸೀರೆ ಧರಿಸುವ ಆಸಕ್ತಿಯನ್ನು ಬೆಳೆಸುವುದು ಈ ದಿನದ ಮತ್ತೊಂದು ಉದ್ದೇಶ. ಸೀರೆ ಮಹಿಳೆಯ ಆತ್ಮವಿಶ್ವಾಸ, ಘನತೆ ಮತ್ತು ಸೌಂದರ್ಯವನ್ನು ಒಟ್ಟಿಗೆ ಪ್ರತಿಬಿಂಬಿಸುವ ಉಡುಪಾಗಿದ್ದು, ವಿಶ್ವ ಸೀರೆ ದಿನವು ಅದನ್ನು ಜಾಗತಿಕ ವೇದಿಕೆಯಲ್ಲಿ ಹೆಮ್ಮೆಯಿಂದ ಆಚರಿಸುವ ಅವಕಾಶ ನೀಡುತ್ತದೆ.
ಸಂಸ್ಕೃತಿ, ಸೌಂದರ್ಯ ಮತ್ತು ಸ್ವಾಭಿಮಾನವನ್ನು ಒಂದೇ ನೂಲಿನಲ್ಲಿ ಕಟ್ಟಿಕೊಟ್ಟಿರುವ ಸೀರೆ, ವಿಶ್ವ ಸೀರೆ ದಿನದ ಮೂಲಕ ಇನ್ನಷ್ಟು ಅರ್ಥಪೂರ್ಣವಾಗುತ್ತದೆ.

