ಹೊಸದಿಗಂತ ಡಿಜಿಟಲ್ ಡೆಸ್ಕ್:
ಅತಿ ಹೆಚ್ಚು ಗಿನ್ನೆಸ್ ದಾಖಲೆಗಳ ಸರಮಾಲೆಯನ್ನು ಧರಿಸಿಕೊಂಡಿರುವ ದುಬೈ ಇದೀಗ ಮತ್ತೊಂದು ಸಾಧನೆಗೆ ಮುನ್ನುಡಿ ಬರೆದಿದೆ.
ದುಬೈ ನಗರದಲ್ಲಿ ಜನಸಂಖ್ಯೆ ಹೆಚ್ಚಾಗಿದ್ದು, ಬಸ್, ಮೆಟ್ರೋದಲ್ಲಿ ಲಕ್ಷಾಂತರ ಮಂದಿ ಓಡಾಟ ನಡೆಸುತ್ತಿದ್ದಾರೆ. ತಮ್ಮ ಸ್ವಂತ ಗಾಡಿ ಇದ್ದರೂ ಟ್ರಾಫಿಕ್ ಸಮಸ್ಯೆಯಿಂದ ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಿದೆ. ಈ ಎಲ್ಲ ಸೌಲಭ್ಯಗಳು ಕೂಡ ದುಬೈ ಜನತೆಗೆ ಸಾಕಾಗುತ್ತಿಲ್ಲ. ಈ ಕಾರಣದಿಂದ ಆಕಾಶದಲ್ಲಿ ಡ್ರೋನ್ ಏರ್ ಟ್ಯಾಕ್ಸಿ ಸೇವೆ ನೀಡಲು ದುಬೈ ಸಜ್ಜಾಗಿದೆ.
ದುಬೈ ರಸ್ತೆ ಸಾರಿಗೆ ಪ್ರಾಧಿಕಾರ (ದುಬೈ ಆರ್‌ಟಿಎ) ಶೂನ್ಯ-ಹೊರಸೂಸುವಿಕೆ ವಾಹನಗಳ ಮೇಲೆ ಕೇಂದ್ರೀಕರಿಸಿ, ಹವಾಮಾನ ಬದಲಾವಣೆಯನ್ನು ತಗ್ಗಿಸುವುದು ಮತ್ತು ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಮೂಲಕ 2050 ರ ವೇಳೆಗೆ ಶೂನ್ಯ-ಹೊರಸೂಸುವಿಕೆ ಯೋಜನೆಯನ್ನು ಬಿಡುಗಡೆ ಮಾಡಿದೆ. ಕಡಿಮೆ ಶಬ್ದ ಹೊಂದಿರುವ ಹಾಗೂ ಆಕಾಶದಲ್ಲಿ ಹಾರಿ ವೇಗವಾಗಿ ತಲುಪಬಲ್ಲ ಏರ್ ಟ್ಯಾಕ್ಸಿ ಸೇವೆಯನ್ನು 2026ರ ವೇಳೆಗೆ ದುಬೈ ನೀಡಲು ಸಜ್ಜಾಗಿದೆ. ಈ ಮೂಲಕ ವಿಶ್ವದಲ್ಲೇ ಡ್ರೋನ್ ಆಧಾರಿತ ಏರ್ ಟ್ಯಾಕ್ಸಿ ಸೇವೆ ಒದಗಿಸುವ ಮೊದಲ ನಗರ ಎಂಬ ಹೆಗ್ಗುರುತಿಗೆ ದುಬೈ ಪಾತ್ರವಾಗಲಿದೆ.
ದುಬೈ ಏರ್ ಟ್ಯಾಕ್ಸಿ ಎನ್ನುವುದು ಡ್ರೋನ್-ಆಧಾರಿತ ವಾಯು ಟ್ಯಾಕ್ಸಿ ಸೇವೆಯಾಗಿದೆ. ಈ ಸೇವೆಯು ದುಬೈನಲ್ಲಿ ವೇಗವಾದ ಮತ್ತು ಸುರಕ್ಷಿತ ಪ್ರಯಾಣಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ದುಬೈ ಏರ್ ಟ್ಯಾಕ್ಸಿಯು ದುಬೈನಲ್ಲಿ ಪ್ರಯಾಣಿಸುವವರಿಗೆ ಒಂದು ಹೊಸ ಮತ್ತು ರೋಮಾಂಚಕ ಅನುಭವವನ್ನು ನೀಡುತ್ತದೆ.
ಡ್ರೋನ್ ಫ್ಲೈಯಿಂಗ್ ಏರ್‌ಕ್ರಾಫ್ಟ್ ಪೈಲೆಟ್ ಮತ್ತು ನಾಲ್ಕು ಜನ ಪ್ರಯಾಣಿಕರು ಹಾಗೂ ತಮ್ಮ ಲಗೇಜ್ ಸಹಿತ 200-350 ಕಿ.ಮೀ. ವೇಗದಲ್ಲಿ ಹೊತ್ತೊಯ್ಯಲಿದೆ. ಎಲೆಕ್ಟ್ರಿಕ್ ಏರ್‌ಟ್ಯಾಕ್ಸಿ ಆಕಾಶದಲ್ಲಿ ಹಾರಾಡುವ ಸಮಯದಲ್ಲಿ ಪ್ರಯಾಣಿಕರಿಗೆ ಮೊಬೈಲ್ ಬಳಕೆ ಸಹ ಮಾಡಲು ನೆಟ್ ವರ್ಕ್ ಇರುತ್ತದೆ. ಏರ್ ಟ್ಯಾಕ್ಸಿ ಚಲಿಸುವಾಗ 45 ಡೆಸಿಬಲ್ ಸೌಂಡ್ ಮಾಡುವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುವ ಸಾಧ್ಯತೆ ತುಂಬಾ ಕಡಿಮೆ.
ಏರ್ ಟ್ಯಾಕ್ಸಿ ಚಲಾಯಿಸುವ ಪೈಲೆಟ್ ಉನ್ನತ ಮಟ್ಟದ ತರಬೇತಿ ಹಾಗೂ ಏರ್ ಮಾರ್ಷಲ್ ಲೈಸೆನ್ಸ್ ಪಡೆದಿರುತ್ತಾರೆ.