ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ವರ್ಲಿಯಲ್ಲಿ ನಡೆದ ಹಿಟ್ ಅಂಡ್ ರನ್ ಕೇಸ್ ನಲ್ಲಿ ಶಿವಸೇನೆ ಮುಖಂಡ ರಾಜೇಶ್ ಶಾ ಅವರ ಪುತ್ರ ಮಿಹಿರ್ ಶಾಗೆ ಜು.30ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಬಿಎಂಡಬ್ಲ್ಯು ಕಾರು ಚಲಾಯಿಸಿ ಸ್ಕೂಟರ್‌ಗೆ ಗುದ್ದಿ ಓರ್ವ ಮಹಿಳೆ ಸಾವನ್ನಪ್ಪಿದ್ದು, ಈ ಕೇಸ್ ಸಂಬಂಧ ಮಿಹಿರ್‌ನ ಪೊಲೀಸ್ ಕಸ್ಟಡಿ ಮುಗಿದಿರುವ ಹಿನ್ನೆಲೆ ಮಂಗಳವಾರ ಶಿವಧಿ ಕೋರ್ಟ್‌ಗೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನು ಈ ಪ್ರಕರಣದ ಮತ್ತೊರ್ವ ಆರೋಪಿ ಮಿಹಿರ್‌ನ ತಂದೆ ರಾಜೇಶ್ ಶಾ ಸದ್ಯ ಜಾಮೀನಿನ ಮೂಲಕ ಹೊರಬಂದಿದ್ದಾರೆ.
ಶಿವಸೇನೆ (ಏಕನಾಥ್ ಶಿಂಧೆ ಬಣ) ನಾಯಕರಾಗಿರುವ ರಾಜೇಶ್ ಶಾ ಅವರ 24 ವರ್ಷದ ಪುತ್ರ ಮಿಹಿರ್ ಶಾ ಕುಡಿದು ಕಾರು ಚಲಾಯಿಸಿ ವರ್ಲಿಯಲ್ಲಿ ಮೀನು ಮಾರಾಟಗಾರ ದಂಪತಿ ಪ್ರದೀಪ್ ನಖ್ವಾ ಮತ್ತು ಕಾವೇರಿ ನಖ್ವಾ ಅವರು ಸಂಚರಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದ್ದ. ಭಾನುವಾರ ಬೆಳಿಗ್ಗೆ 5.30ರ ಸುಮಾರಿಗೆ ಈ ಘಟನೆ ನಡೆದಿತ್ತು. ಕಾರು ಡಿಕ್ಕಿ ಹೊಡೆದ ಪರಿಣಾಮ ಪ್ರದೀಪ್ ಎಸೆಯಲ್ಪಟ್ಟರೆ, ಕಾವೇರಿ ಅವರ ದೇಹ ಚಕ್ರಗಳ ಅಡಿಯಲ್ಲಿ ಸಿಕ್ಕಿ ಬಿದ್ದಿದ್ದು, ಕಾರು 1.5 ಕಿ.ಮೀ. ದೂರ ಎಳೆದೊಯ್ದಿತ್ತು.ಅಪಘಾತ ನಡೆದ ನಂತರ ಮಿಹಿರ್ ಚಾಲಕ ರಾಜರ್ಷಿ ಬಿದಾವತ್‌ನನ್ನು ಡ್ರೈವರ್ ಸೀಟ್‌ನಲ್ಲಿ ಕೂರಿಸಿದ್ದನು. ಬಳಿಕ ಅವರು ಬಾಂದ್ರಾದ ಕಲಾ ನಗರಕ್ಕೆ ತೆರಳಿ ಅಲ್ಲಿ ನಂಬರ್ ಪ್ಲೇಟ್ ಅನ್ನು ತೆಗೆದು ತಲೆ ಮರೆಸಿಕೊಂಡಿದ್ದರು. ಈ ವೇಳೆ ಮಿಹಿರ್ ಶಾ ತನ್ನ ಪ್ರೇಯಸಿಯೊಂದಿಗೆ ಸುಮಾರು 40 ಬಾರಿ ಮಾತನಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಕಲಾ ನಗರದಲ್ಲಿ ಕಾರು ನಿಲ್ಲಿಸಿ ಮಿಹಿರ್ ಶಾ ಆಟೋ ಹತ್ತಿ ಗೋರೆಗಾಂವ್‌ನಲ್ಲಿರುವ ಪ್ರೇಯಸಿ ಮನೆಗೆ ತೆರಳಿದ್ದ. ಅಪಘಾತದ ವಿಚಾರವನ್ನು ಪ್ರೇಯಸಿ ತನ್ನ ಸಹೋದರಿ ಜತೆಗೆ ಹಂಚಿಕೊಂಡಿದ್ದಳು. ಬಳಿಕ ಸಹೋದರಿ ಆಗಮಿಸಿ ಮಿಹಿರ್‌ನನ್ನು ಬೋರಿವಲಿಯಲ್ಲಿರುವ ತಮ್ಮ ಮನೆಗೆ ಕರೆದೊಯ್ದಿದ್ದರು. ಈ ವೇಳೆ ಮಿಹಿರ್‌ನ ಕುಟುಂಬ ಆತ ಎಲ್ಲಿ ತಲೆ ಮರೆಸಿಕೊಂಡಿದ್ದಾನೆ ಎನ್ನುವ ವಿಚಾರವನ್ನು ಪೊಲೀಸರಿಗೆ ತಿಳಿಸಿರಲಿಲ್ಲ. ಪೊಲೀಸರ 14 ತಂಡ ಆತನಿಗಾಗಿ ತೀವ್ರ ಶೋಧ ನಡೆಸುತ್ತಿತ್ತು.ಸೋಮವಾರ ರಾತ್ರಿ ಮಿಹಿರ್ ವಿರಾರ್‌ನಲ್ಲಿರುವ ತನ್ನ ಮನೆಗೆ ತೆರಳಿದ್ದ. ಮಂಗಳವಾರ ಬೆಳಿಗ್ಗೆ ಆತನ ಸ್ನೇಹಿತ ಅವದೀಪ್ ತನ್ನ ಫೋನ್ ಅನ್ನು 15 ನಿಮಿಷಗಳ ಕಾಲ ಆನ್ ಮಾಡಿದಾಗ ಪೊಲೀಸರು ಅವರಿರುವ ಜಾಗ ಪತ್ತೆ ಮಾಡಿ ಮಿಹಿರ್‌ನನ್ನು ವಶಕ್ಕೆ ಪಡೆದುಕೊಂಡಿದ್ದರು. ಮಿಹಿರ್‌ನನ್ನು ಬುಧವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಜುಲೈ 16ರವರೆಗೆ ಪೊಲೀಸ್ ಕಸ್ಟಡಿಗೆ ವಹಿಸಲಾಗಿದೆ.