ಹದಗೆಟ್ಟ ಆರ್ಥಿಕತೆ- ಚೀನಾವನ್ನು ತೊರೆಯುತ್ತಿವೆ ಲಕ್ಶುರಿ ಬ್ರ್ಯಾಂಡ್‌ಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಪೂರ್ವದಲ್ಲಿ ಪ್ರಪಂಚದ ಪ್ರಮುಖ ಲಕ್ಶುರಿ ಉತ್ಪನ್ನಗಳ ತಯಾರಕ ಎಂದೆನಿಸಿದ್ದ ಚೀನಾ ಇದೀಗ ಆ ಪಟ್ಟವನ್ನು ಕಳೆದುಕೊಳ್ಳುತ್ತಿದೆ. ಪ್ರಪಂಚವೆಲ್ಲ ಕೊರೊನಾ ಮಹಾಮಾರಿಯಿಂದ ಹೊರಬಂದು ಮತ್ತೆ ಎಂದಿನಂತೆ ಮುಂದುವರೆಯುತ್ತಿದ್ದರೆ, ಅದರ ಜನಕ ಚೀನಾ ಇನ್ನೂ ಕೋವಿಡ್‌ ಸಾಂಕ್ರಾಮಿಕದಿಂದಾಗಿ ತತ್ತರಿಸುತ್ತಿದೆ. ಈ ಕಾರಣದಿಂದ ಚೀನಾದ ಆರ್ಥಿಕತೆಯು ಹದಗೆಟ್ಟಿದ್ದು ಪ್ರಪಂಚದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಿದ್ದ ಚೀನಾವು ಹಿಂದೆಂದಿಗಿಂತಲೂ ಕಡಿಮೆ ಅಭಿವೃದ್ಧಿ ದರವನ್ನು ದಾಖಲಿಸಿದೆ. ಈ ಕಾರಣದಿಂದ ಚೀನಾದಲ್ಲಿ ಯಾವೆಲ್ಲ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಉತ್ಪಾದನಾ ಘಟಕವನ್ನು ಸ್ಥಾಪಿಸಿದ್ದವೋ ಅವೆಲ್ಲ ಈಗ ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದು ಭಾರತ, ಜಪಾನ್‌ ಸೇರಿದಂತೆ ದಕ್ಷಿಣ ಏಷ್ಯಾದ ಇತರ ದೇಶಗಳತ್ತ ಮುಖ ಮಾಡುತ್ತಿವೆ.

ಮೇಲ್ದರ್ಜೆಯ ಫೋನುಗಳು, ಸೌಂದರ್ಯ ವರ್ಧಕಗಳು (ಕಾಸ್ಮೆಟಿಕ್ಸ್)‌, ದುಬಾರಿ ಬ್ಯಾಗುಗಳು ಮುಂತಾದ ಐಷಾರಾಮಿ ವಸ್ತುಗಳ ಉತ್ಪಾದನೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶವೊಂದನ್ನು ಬ್ರ್ಯಾಂಡ್‌ ಆಗಿಸುವಲ್ಲಿ ಅಥವಾ ಪ್ರಭಾವ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೋವಿಡ್‌ ಪೂರ್ವ ಕಾಲಘಟ್ಟ 2020ರಲ್ಲಿ ಜಾಗತಿಕವಾಗಿ ಸರಬರಾಜಾಗುವ ಲಕ್ಶುರಿ ಉತ್ಪನ್ನಗಳಲ್ಲಿ 32 ಶೇಕಡಾದಷ್ಟು ಪಾಲು ಅಂದರೆ 50 ಬಿಲಿಯನ್‌ ಡಾಲರುಗಳಷ್ಟು ಮೌಲ್ಯದ ಮಾರುಕಟ್ಟೆ ಪಾಲನ್ನು ಚೀನಾ ಹೊಂದಿತ್ತು. ಆದರೆ ನಂತರದಲ್ಲಿ ಬಂದ ಕೋವಿಡ್‌ ನಿಂದ ಕಠಿಣ ಲಾಕ್‌ಡೌನ್‌, ಆರ್ಥಿಕ ಹಿಂಜರಿತ, ಉತ್ಪಾದನೆಯಲ್ಲಿ ಕೊರತೆ, ಬೇಡಿಕೆ ಕುಸಿತ ಎದುರಿಸುವಂತಾದ ಪರಿಣಾಮ ಚೀನಾ ಈಗ ಪ್ರಮುಖ ಲಕ್ಶುರಿ ಉತ್ಪನ್ನಗಳ ತಯಾರಕನಾಗಿ ಉಳಿದಿಲ್ಲ. ಪ್ರಮುಖ ಲಕ್ಶುರಿ ಬ್ರ್ಯಾಂಡ್‌ ಗಳು ಚೀನಾವನ್ನು ತೊರೆದು ದಕ್ಷಿಣ ಏಷ್ಯಾದ ಪ್ರಮುಖ ದೇಶಗಳಾದ ಭಾರತ, ಜಪಾನ್‌, ದಕ್ಷಿಣ ಕೊರಿಯಾದತ್ತ ಮುಖ ಮಾಡುತ್ತಿವೆ.

ಲೂಯಿಸ್‌ ವೆಟ್ಟಾನ್‌, ಶನೆಲ್‌, ಬರ್ಬರಿ ಗ್ರುಪ್‌ ಸೇರಿದಂತೆ ಪ್ರಮುಖ ಯುರೋಪಿಯನ್ ಲಕ್ಶುರಿ ಬ್ರ್ಯಾಂಡ್‌ಗಳೆಲ್ಲ ಈಗ ಚೀನಾವನ್ನು ತೊರೆದು ಬೇರೆ ದೇಶಗಳಲ್ಲಿ ತಮ್ಮ ಉತ್ಪಾದನೆ ಆರಂಭಿಸಲು ಮುಂದಾಗಿವೆ. ವರದಿಯೊಂದರ ಪ್ರಕಾರ ಈ ದೇಶಗಳಲ್ಲಿನ ಕಾರ್ಮಿಕರ ವೆಚ್ಚ, ಕಡಿಮೆ ಕರೆನ್ಸಿ ಮೌಲ್ಯಗಳು ಕಂಪನಿಗಳನ್ನು ಆಕರ್ಷಿಸುತ್ತಿದ್ದು ಜೊತೆಗೆ ಈ ದೇಶಗಳಲ್ಲಿ ಲಕ್ಶುರಿ ಉತ್ಪನ್ನಗಳ ಬೇಡಿಕೆಯೂ ಹೆಚ್ಚಿರುವುದರಿಂದ ಕಂಪನಿಗಳು ಈ ದೇಶದ ಮಾರುಕಟ್ಟೆಗಳಿಗೆ ಲಗ್ಗೆಯಿಡಲು ಯೋಚಿಸುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!