October 11, 2026
Sunday, October 11, 2026
spot_img

ನವರಾತ್ರಿಯಲ್ಲಿದೆ ದೇವಿಯ ಆರಾಧನೆಗೆ ವಿಶೇಷ ಫಲ: ಲಲಿತೋಪಾಖ್ಯಾನದ ಮಹತ್ವ ಸಾರಿದ ರಾಘವೇಶ್ವರ ಶ್ರೀ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವರಾತ್ರಿಯ ಪರ್ವಕಾಲವು ದೇವಿಯ ಉಪಾಸನೆಗೆ ಅತ್ಯಂತ ಪ್ರಶಸ್ತ ಸಮಯ. ಈ ಸಂದರ್ಭದಲ್ಲಿ ಶ್ರದ್ಧೆಯಿಂದ ಮಾಡುವ ಅಲ್ಪ ಸೇವೆಯೂ ಅನಂತ ಫಲವನ್ನು ನೀಡಬಲ್ಲದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ್ಯ ನಮಸ್ಯಾ’ ಕಾರ್ಯಕ್ರಮದಲ್ಲಿ ಲಲಿತೋಪಾಖ್ಯಾನ ಪ್ರವಚನವನ್ನು ಶ್ರೀಗಳು ಅನುಗ್ರಹಿಸಿದರು.

ಪ್ರಕೃತಿಯ ಬದಲಾವಣೆಗಳು ಮನುಷ್ಯನ ದೇಹ ಮತ್ತು ಮನಸ್ಸಿನ ಮೇಲೂ ಪ್ರಭಾವ ಬೀರುತ್ತವೆ. ಮಳೆಗಾಲದ ಬಳಿಕ ಪ್ರಕೃತಿ ಪ್ರಸನ್ನವಾಗುವ ಶರತ್ಕಾಲವು ಆಧ್ಯಾತ್ಮಿಕ ಸಾಧನೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸುತ್ತದೆ. ಹೀಗಾಗಿ ನವರಾತ್ರಿಯು ದೇವಿಯ ಆರಾಧನೆ, ಜಪ ಮತ್ತು ಪಠನಕ್ಕೆ ಅತ್ಯುತ್ತಮ ಕಾಲವಾಗಿದೆ ಎಂದು ತಿಳಿಸಿದರು.

ನವರಾತ್ರಿ ವ್ರತವನ್ನು ಯಾರು ಬೇಕಾದರೂ ಆಚರಿಸಬಹುದು. ಹಿಂದಿನಿಂದಲೂ ಈ ವ್ರತವನ್ನು ಆಚರಿಸಿಕೊಂಡು ಬಂದವರು ಪರಂಪರೆಯನ್ನು ಮುಂದುವರಿಸಬೇಕು. ದೇವಿಯ ಚರಿತ್ರೆಯ ಪಠನ ಮತ್ತು ಶ್ರವಣಕ್ಕೆ ನವರಾತ್ರಿಯಲ್ಲಿ ವಿಶೇಷ ಮಹತ್ವವಿದೆ ಎಂದು ಶ್ರೀಗಳು ಹೇಳಿದರು.

ಲಲಿತೋಪಾಖ್ಯಾನವನ್ನು ಒಮ್ಮೆ ಅನುಸಂಧಾನ ಮಾಡುವುದರಿಂದ ಕೋಟಿ ಬಾರಿ ದೇವಿ ಮಹಾತ್ಮೆಯನ್ನು ಅನುಸಂಧಾನ ಮಾಡಿದ ಫಲ ದೊರೆಯುತ್ತದೆ. ಲಲಿತೋಪಾಖ್ಯಾನವು ಇಂದಿನ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿಲ್ಲ. ಇದು ದೇವಿಯ ಮಹಿಮೆಯನ್ನು ವರ್ಣಿಸುವ ಕಥಾನಕವಾಗಿದ್ದು, ‘ನವರಾತ್ರ್ಯ ನಮಸ್ಯಾ’ದಲ್ಲಿ ಲಲಿತೋಪಾಖ್ಯಾನ ಪ್ರವಚನದ ಮೂಲಕ ಪ್ರತಿದಿನ ದೇವಿಯನ್ನು ವಾಗ್ಪುಷ್ಪಗಳಿಂದ ಪೂಜಿಸಲಾಗುವುದು ಎಂದರು.

ಇದಕ್ಕೂ ಮೊದಲು ಶ್ರೀಗಳ ಸಾನ್ನಿಧ್ಯದಲ್ಲಿ ಮಣ್ಣಿನ ರಾಜರಾಜೇಶ್ವರಿಯ ಪ್ರತಿಷ್ಠೆ ನಡೆಯಿತು. ನವರಾತ್ರ್ಯ ನಮಸ್ಯಾದ ಅಂಗವಾಗಿ ರಾಜರಾಜೇಶ್ವರಿಯ, ಶ್ರೀಮಹಾಕಾಳಿ ಮಂತ್ರ ಹವನ, ಸಪ್ತಶತೀ ಪಾರಾಯಣ, ಮಾತೆಯರಿಂದ ಕುಂಕುಮಾರ್ಚನೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆದವು.

ಶ್ರೀಮಠದ ಸಮ್ಮುಖ ಸರ್ವಾಧಿಕಾರಿಗಳಾದ ನಿವೃತ್ತ ಪೋಲಿಸ್ ಮಹಾನಿರ್ದೇಶಕ ತಿಮ್ಮಪ್ಪಯ್ಯ ಮಡಿಯಾಲ್, ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ವಿತ್ತಾಧ್ಯಕ್ಷ ಗಣೇಶ್ ಜೆ.ಎಲ್, ಹವ್ಯಕ ಮಹಾಮಂಡಲದ ಅಧ್ಯಕ್ಷ ಡಾ. ವೈ.ವಿ. ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಚಟ್ನಳ್ಳಿ, ನವರಾತ್ರ ನಮಸ್ಯಾದ ಪ್ರಧಾನ ಸಂಯೋಜಕ ರಮೇಶ ಹೆಗಡೆ ಕೋರಮಂಗಲ, ಡಾ| ಶಾರದಾ ಜಯಗೋವಿಂದಾ, ರಮಾನಾಥ ಬಿ.ಎಲ್, ದಿನಪ್ರಧಾನರಾಗಿ ಶ್ರೀಮಠದ ಶಾಸನತಂತ್ರದ ಅಧ್ಯಕ್ಷ ಮೋಹನ ಭಾಸ್ಕರ ಹೆಗಡೆ ದಂಪತಿ ಸೇರಿದಂತೆ ಸಾವಿರಾರು ಭಕ್ತರು ದೇವಿಯ ಉಪಾಸನೆಯಲ್ಲಿ ಭಾಗಿಗಳಾದರು.

Must Read