ಹೊಸದಿಗಂತ ವರದಿ,ನಾಗಮಂಗಲ :
ತಾಲೂಕಿನ ಆದಿಚುಂಚಗಿರಿ ಮಹಾಸಂಸ್ಥಾನಮಠದ ಶ್ರೀ ಕಾಲಭೈರವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಗುರುವಾರ ನಡೆದ ಅಮವಾಸ್ಯೆ ವಿಶೇಷ ಪೂಜಾಕಾರ್ಯದಲ್ಲಿ ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ನೂತನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪಾಲ್ಗೊಂಡು ಕ್ಷೇತ್ರಾಧಿದೇವತೆಗಳ ದರ್ಶನಾಶೀರ್ವಾದ ಪಡೆದುಕೊಂಡರು.
ಶ್ರೀಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥಶ್ರೀಗಳ ನೇತೃತ್ವದಲ್ಲಿ ನಡೆದ ಅಮಾವಾಸ್ಯೆ ಪೂಜಾ ಕಾರ್ಯಕ್ರಮದಲ್ಲಿ ನೂತನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕ್ಷೇತ್ರಪಾಲಕ ಶ್ರೀ ಕಾಲಭೈರವೇಶ್ವರಸ್ವಾಮಿ ಸೇರಿದಂತೆ ಎಲ್ಲಾ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನಾಶೀರ್ವಾದ ಪಡೆದರು. ಅಲ್ಲದೇ ಭೈರವೈಕ್ಯಶ್ರೀ ಡಾ.ಬಾಲಗಂಗಾಧರನಾಥ ಸ್ವಾಮೀಜಿಯವರ ಮಹಾಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಿದರು.
ಶ್ರೀ ಕಾಲಭೈರವೇಶ್ವರನಿಗೆ ಅಮಾವಾಸೆ ಪ್ರಯುಕ್ತ ಜರುಗುವ ಪಂಚಾಮೃತಾಭಿಕಷೇಕ, ಭಸ್ಮಾಭಿಷೇಕ, ಬಿಲ್ವಾಭಿಷೇಕ, ಪುಷ್ಪಾಭಿಷೇಕ ಹಾಗೂ ಸುಗಂಧ ದ್ರವ್ಯಾಗಳೊಂದಿಗೆ ಶ್ರೀಗಳು ಪೂಜೆ ನರೆವೇರಿಸಿದರು. ಅಪಾರ ಸಂಖ್ಯೆಯಲ್ಲಿ ಭಕ್ತರೂ ಕೂಡ ಆಗಮಿಸಿದ್ದರು.
ಸಂಸದರಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ಕೊಟ್ಟ ಯದುವೀರ ಕೃಷ್ಣದತ್ತ ಒಡೆಯರ್ ಅವರಿಗೆ ಶ್ರೀ ಮಠದ ಸಂಪ್ರದಾಯದಂತೆ ಡಾ.ನಿರ್ಮಲಾನಂದನಾಥ ಶ್ರೀಗಳು ಶಾಲು ಹೊದಿಸಿ ಏಲಕ್ಕಿ ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಆಶೀರ್ವದಿಸಿದರು.