ಎನ್‌ಡಿಎ ಕೂಟಕ್ಕೆ ಉದ್ಧವ್ ಠಾಕ್ರೆ ಘರ್ ವಾಪ್ಸಿ?

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಸರಕಾರ ರಚಿಸುವ ಯೋಜನೆಯಲ್ಲಿದ್ದು, ಈಗಾಗಲೇ ಮಿತ್ರಪಕ್ಷಗಳ ಬೆಂಬಲ ಸಿಕ್ಕ ಹಿನ್ನೆಲೆ ಮೋದಿ ಮತ್ತೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಇದರ ನಡುವೆ ಈ ಹಿಂದೆ ಬಿಜೆಪಿ ಮೈತ್ರಿಕೂಟದ ಭಾಗವಾಗಿದ್ದ ಶಿವಸೇನೆಯ – ಉದ್ಧವ್ ಠಾಕ್ರೆ ಬಣ ಮರಳಿಗೂಡಿಗೆ ಬರಲಿದೆ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ, ಎನ್‌ಸಿಪಿ – ಶರದ್ ಪವಾರ್ ಬಣದ ನಾಯಕರು ಸ್ಪಷ್ಟನೆಯನ್ನು ನೀಡಿದ್ದಾರೆ.

ಈಗ ಹರಿದಾಡುತ್ತಿರುವ ಸುದ್ದಿಗಳಿಗೆ ಯಾವುದೇ ಆಧಾರವಿಲ್ಲ, ಶಿವಸೇನೆಯ – ಯುಬಿಟಿ ಬಣ, ಇಂಡಿಯಾ ಮೈತ್ರಿಕೂಟದಲ್ಲೇ ಇರಲಿದೆ. ಈ ಬಗ್ಗೆ ಯಾವುದೇ ಸಂದೇಹ ಬೇಡ, ಉದ್ದೇಶಪೂರ್ವಕವಾಗಿಯೇ ಇಂತಹ ಸುದ್ದಿಗಳನ್ನು ಹರಿಯಬಿಡಲಾಗುತ್ತಿದೆಎಂದು ಎನ್‌ಸಿಪಿ – ಶರದ್ ಪವಾರ್ ಬಣದ ಮುಖ್ಯಸ್ಥ ಜಯಂತ್ ಪಾಟೀಲ್ ಹೇಳಿದ್ದಾರೆ.

ಈ ಬಾರಿಯ ಚುನಾವಣೆಯಲ್ಲಿ ಮಹಾವಿಕಾಸ್ ಆಗಾಡಿ ಉತ್ತಮ ಸಾಧನೆಯನ್ನು ಮಾಡಿದೆ. ನಮ್ಮ ಮೈತ್ರಿಕೂಟಕ್ಕೆ 30 ಸ್ಥಾನ ಲಭಿಸಿದೆ. ಉದ್ಧವ್ ಠಾಕ್ರೆ ಅವರ ಪಕ್ಷ, ಬಿಜೆಪಿ ಮೈತ್ರಿಕೂಟಕ್ಕೆ ಹೋಗುತ್ತೆ ಎನ್ನುವುದು ಶುದ್ದ ಸುಳ್ಳುಸುದ್ದಿ. ಮಹಾರಾಷ್ಟ್ರದಲ್ಲಿ ಹಿಂದೆ ನಮ್ಮ ಸರ್ಕಾರ ಬರಲು ಕಾರಣವೇ ಅವರು ಎಂದು ಜಯಂತ್ ಪಾಟೀಲ್ ಹೇಳಿದ್ದಾರೆ.

ನಾವು ಈ ಲೋಕಸಭಾ ಚುನಾವಣೆಯಲ್ಲಿ ಎರಡನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದೇವೆ. ಏಕನಾಥ್ ಶಿಂಧೆ ಬಣ ನಮ್ಮಿಂದ ದೂರವಾದ ನಂತರ ನಮಗೆ ಸಿಕ್ಕ ಬಹುದೊಡ್ಡ ಶಕ್ತಿಯಿದು. ನಮ್ಮ ಬಣ, ಬಿಜೆಪಿ ಮೈತ್ರಿಕೂಟಕ್ಕೆ ವಾಪಸ್ ಹೋಗಲಿದೆ ಎನ್ನುವುದು ಸುಳ್ಳು ಎಂದು ಠಾಕ್ರೆ ಬಣದ ವಕ್ತಾರರು ಹೇಳಿದ್ದಾರೆ.

ಆದ್ರೆ ಇತ್ತ ಉದ್ಧವ್ ಠಾಕ್ರೆ ಮತ್ತು ಸಂಜಯ್ ರಾವತ್ ಅವರು ಪ್ರಧಾನಿ ಮೋದಿ ಬಗ್ಗೆ ಹೇಳಿಕೆಯನ್ನು ನೀಡುತ್ತಲೇ ಇರುತ್ತಾರೆ. ನಾನು ಅತ್ಯಂತ ಆತ್ಮವಿಶ್ವಾಸದಿಂದ ಹೇಳಬಲ್ಲೆ. ಚುನಾವಣಾ ಫಲಿತಾಂಶ ಬಂದ ಹದಿನೈದು ದಿನದೊಳಗೆ ಠಾಕ್ರೇಜೀ ಮೋದಿ ಸರ್ಕಾರದ ಕ್ಯಾಬಿನೆಟ್ ಸೇರಲಿದ್ದಾರೆ ಎಂದು ಬಿಜೆಪಿ ನಾಯಕ ರವಿ ರಾಣಾ ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಶಿವಸೇನೆ ಯುಬಿಟಿ ಬಣ 9, ಕಾಂಗ್ರೆಸ್ 13, ಎನ್‌ಸಿಪಿ – ಶರದ್ ಪವಾರ್ ಬಣ 8 ಸ್ಥಾನವನ್ನು ಗೆದ್ದಿತ್ತು. ಆ ಮೂಲಕ ಮೈತ್ರಿಕೂಟ, 48 ಸ್ಥಾನಗಳ ಪೈಕಿ 30 ಸ್ಥಾನವನ್ನು ಗೆದ್ದಿತ್ತು.

ಇತ್ತ ಬಿಜೆಪಿ 9, ಶಿವಸೇನೆ 7 ಮತ್ತು ಎನ್‌ಸಿಪಿ ಕೇವಲ 1 ಸ್ಥಾನವನ್ನು ಗೆದ್ದಿತ್ತು, ಒಬ್ಬರು ಪಕ್ಷೇತರರು ಗೆದ್ದಿದ್ದರು.

2019ರಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿದ್ದ ಶಿವಸೇನೆಯು 18 ಸ್ಥಾನ ಮತ್ತು ಬಿಜೆಪಿ 23 ಸ್ಥಾನವನ್ನು ಗೆದ್ದಿತ್ತು. ಒಂದು ಸ್ಥಾನವನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ 13 ಸ್ಥಾನದಲ್ಲಿ ಗೆಲುವನ್ನು ಸಾಧಿಸಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!