March 29, 2026
Sunday, March 29, 2026
spot_img

ಯಮಪಾಶವಾಯ್ತು ಮಾಡಿದ ಸಾಲ: ಆರ್ಥಿಕ ಒತ್ತಡಕ್ಕೆ ಎರಡು ಜೀವ ಬಲಿ, ಇಬ್ಬರ ಸ್ಥಿತಿ ಗಂಭೀರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರು ನಗರದ ಹೊರವಲಯದ ಆನೇಕಲ್ ತಾಲೂಕಿನ ಮಲ್ಲೇನಹಳ್ಳಿಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ರಾಜ್ಯವನ್ನು ಬೆಚ್ಚಿಬೀಳಿಸಿದೆ. ಸಾಲದ ಒತ್ತಡಕ್ಕೆ ಕುಗ್ಗಿದ ವ್ಯಕ್ತಿಯೊಬ್ಬ ತನ್ನ ಕುಟುಂಬದವರ ಮೇಲೆ ದಾಳಿ ನಡೆಸಿ, ಬಳಿಕ ಆತ್ಮಹತ್ಯೆಗೆ ಯತ್ನಿಸಿರುವುದು ಬೆಳಕಿಗೆ ಬಂದಿದೆ.

ಈ ಘಟನೆಯಲ್ಲಿ ತಾಯಿ ಆಶಾ (55) ಮತ್ತು ಅಕ್ಕ ವರ್ಷಿತಾ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೋಹನ್ ಗೌಡ (27) ಹಾಗೂ ಅಕ್ಕನ ಮಗ ಮಯಾಂಕ್ (11) ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಮೋಹನ್ ಗೌಡ ಸಾಲದ ಸಮಸ್ಯೆಯಿಂದ ಬಹಳ ದಿನಗಳಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದನು ಎನ್ನಲಾಗಿದೆ. ಗಾಯಾಳು ಮೋಹನ್ ಚೀಟಿ ವ್ಯವಹಾರದಲ್ಲಿ ಸಾಲ ಮಾಡಿಕೊಂಡಿದ್ದ. ಜೊತೆಗೆ ಐಷಾರಾಮಿ ಜೀವನಕ್ಕೆಂದು ದುಂದು ವೆಚ್ಚ ಮಾಡಿದ್ದು, ಸಾಲ ತೀರಿಸಲಾಗದೆ ಈ ನಿರ್ಧಾರಕ್ಕೆ ಬಂದಿದ್ದ ಎನ್ನಲಾಗಿದೆ. ಈ ಬಗ್ಗೆ ಆತ ತನ್ನ ಸಂಬಂಧಿಕರಿಗೆ ವಿಡಿಯೋ ಸಂದೇಶ ಕಳುಹಿಸಿ ಆತ್ಮಹತ್ಯೆ ಸೂಚನೆ ನೀಡಿದ್ದಾನೆ.

ಸಂಬಂಧಿಕರು ತಕ್ಷಣ ಮನೆಗೆ ಆಗಮಿಸಿದಾಗ ಬಾಗಿಲು ಒಳಗಿನಿಂದ ಲಾಕ್ ಆಗಿರುವುದು ಕಂಡುಬಂದಿದೆ. ಅನುಮಾನಗೊಂಡ ಅವರು ಬಾಗಿಲು ಒಡೆದು ಒಳಗೆ ನುಗ್ಗಿದಾಗ, ರಕ್ತದ ಮಡುಗಟ್ಟಿದ ದೃಶ್ಯ ಕಂಡು ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು.

ಇದನ್ನೂ ಓದಿ:

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅತ್ತಿಬೆಲೆ ಪೊಲೀಸ್ ಠಾಣೆನಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಸಾಲದ ಒತ್ತಡವೇ ಈ ದುರ್ಘಟನೆಗೆ ಕಾರಣ ಎನ್ನಲಾಗಿದ್ದು, ಪೊಲೀಸರು ಹೆಚ್ಚಿನ ಮಾಹಿತಿಗಾಗಿ ತನಿಖೆ ಮುಂದುವರಿಸಿದ್ದಾರೆ.

ಒಟ್ಟಿನಲ್ಲಿ, ಆರ್ಥಿಕ ಒತ್ತಡಗಳು ಹೇಗೆ ಕುಟುಂಬದ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂಬುದಕ್ಕೆ ಈ ಘಟನೆ ದಾರುಣ ಉದಾಹರಣೆಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !