ಭಾರೀ ಮಳೆ: ಯಮುನೋತ್ರಿ, ಬದರಿನಾಥ ಹೆದ್ದಾರಿಗಳಲ್ಲಿ ಗುಡ್ಡ ಕುಸಿತ, ಸಂಚಾರ ಸ್ಥಗಿತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಉತ್ತರಾಖಂಡದಲ್ಲಿ ಎಡಬಿಡದೆ ಮಳೆ ಸುರಿಯುತ್ತಿದ್ದು, ಚಾರ್‌ಧಾಮ್‌ ಯಾತ್ರೆಯ ಹಲವು ಹೆದ್ದಾರಿಗಳಲ್ಲಿ ಗುಡ್ಡ ಕುಸಿತ ಘಟನೆಗಳು ನಡೆಯುತ್ತಿವೆ. ಶನಿವಾರ ಬೆಳ್ಳಂಬೆಳಗ್ಗೆ ಯಮುನೋತ್ರಿ, ಬದರಿನಾಥ ಹೆದ್ದಾರಿಗಳಲ್ಲಿ ಗುಡ್ಡ ಕುಸಿತದ ಪರಿಣಾಮದಿಂದಾ ಸಂಚಾರ ಸ್ಥಗಿತಕೊಂಡಿದ್ದು, ಪ್ರವಾಸಿಗರು ಮತ್ತು ಸ್ಥಳೀಯರು ಉತ್ತರಕಾಶಿಯಲ್ಲಿ ಸಿಲುಕಿಕೊಂಡಿದ್ದಾರೆ.

ಈ ಪ್ರದೇಶದ ದೃಶ್ಯಗಳು ವಾಹನಗಳು ಅವಶೇಷಗಳಲ್ಲಿ ಸಿಲುಕಿಕೊಂಡಿದ್ದು, ಪ್ರಯಾಣಿಕರು ಪರದಾಡುತ್ತಿರುವುದನ್ನು ತೋರಿಸುತ್ತವೆ. ಉತ್ತರಕಾಶಿ ಆಡಳಿತದ ಪ್ರಕಾರ, ಛತ್ತಂಗ ಸೇರಿದಂತೆ ಅನೇಕ ಸ್ಥಳಗಳಲ್ಲಿ ಹೆದ್ದಾರಿಯನ್ನು ನಿರ್ಬಂಧಿಸಲಾಗಿದೆ. ಪರಿಸ್ಥಿತಿಯನ್ನು ಅವಲೋಕಿಸಲು ತಹಸೀಲ್ದಾರ್ ಅವರನ್ನು ಕಳುಹಿಸಲಾಗಿದೆ.

ಭಾರೀ ಮಳೆಯಿಂದಾಗಿ ಕಸ್ತೂರಬಾ ಗಾಂಧಿ ವಸತಿ ಶಾಲೆಯಲ್ಲಿ ನೀರು ನಿಂತಿದ್ದು, ಶಾಲಾ ಮಕ್ಕಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ ತಂಡ ಮತ್ತು ಅಗ್ನಿಶಾಮಕ ದಳದ ತಲಾ ಒಂದು ತಂಡವನ್ನು ಕೂಡಲೇ ಸ್ಥಳಕ್ಕೆ ಕಳುಹಿಸಿ ಪರಿಹಾರ ಕಾರ್ಯ ಕೈಗೊಳ್ಳಲಾಗಿದೆ.

ಅದೇ ರೀತಿ, ಚಮೋಲಿ ಜಿಲ್ಲೆಯ ಬಳಿಯ ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯೂ ಮೂರು ಕಡೆಗಳಲ್ಲಿ ಬ್ಲಾಕ್‌ ಆಗಿದೆ. ಘಟನೆಯಿಂದ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡರು. “ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಂದಪ್ರಯಾಗ, ಬೆಲಕುಚಿ ಮತ್ತು ಪಗಲ್ನಾಲಾದಲ್ಲಿ ಗುಡ್ಡ ಕುಸಿತದ ಕಾರಣ ರಸ್ತೆಯನ್ನು ನಿರ್ಬಂಧಿಸಲಾಗಿದೆ” ಎಂದು ಚಮೋಲಿ ಪೊಲೀಸರು ಶನಿವಾರ ಬೆಳಿಗ್ಗೆ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಉತ್ತರಾಖಂಡ್‌ನಲ್ಲಿ, ಮುಂದಿನ 24 ಗಂಟೆಗಳಲ್ಲಿ ಡೆಹ್ರಾಡೂನ್, ಉತ್ತರಕಾಶಿ, ತೆಹ್ರಿ, ಪೌರಿ ಮತ್ತು ನೈನಿತಾಲ್‌ನ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!