September 27, 2026
Sunday, September 27, 2026
spot_img

‘ರಾಮಾಯಣ’ ಮಹಾಕಾವ್ಯಕ್ಕೆ ಯಶ್-ರಣ್‌ಬೀರ್ ಮೆರುಗು: ವಿಶ್ವದಾದ್ಯಂತ ಕೌತುಕ ಹುಟ್ಟಿಸಿದ ಹೊಸ ಪೋಸ್ಟರ್‌ಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾವಾಗಿ ಮೂಡಿಬರುತ್ತಿರುವ ‘ರಾಮಾಯಣ’ ಈಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ದಂಗಲ್ ಖ್ಯಾತಿಯ ನಿತೇಶ್ ತಿವಾರಿ ನಿರ್ದೇಶನದಲ್ಲಿ ಹಾಗೂ ವಿಶ್ವಪ್ರಸಿದ್ಧ VFX ಸಂಸ್ಥೆ ‘DNEG’ ಮಾಲೀಕ ನಮಿತ್ ಮಲ್ಹೋತ್ರಾ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಭಾರತೀಯ ಸಂಸ್ಕೃತಿ ಮತ್ತು ಪುರಾಣವನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸುವ ಸಾಹಸಕ್ಕೆ ಕೈಹಾಕಿದೆ.

ಮೊದಲ ಹಂತದ ಪ್ರಚಾರ ಮುಗಿಸಿರುವ ಚಿತ್ರತಂಡ, ಇದೀಗ ಎರಡನೇ ಹಂತದ ಪ್ರಚಾರಕ್ಕೆ ಚಾಲನೆ ನೀಡಿದ್ದು, ವಿಶ್ವವೇ ತಿರುಗಿ ನೋಡುವಂತಹ ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿ ಅಭಿಮಾನಿಗಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

ಚಿತ್ರತಂಡ ಬಿಡುಗಡೆ ಮಾಡಿರುವ ಪೋಸ್ಟರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಮೊದಲ ಪೋಸ್ಟರ್‌ನಲ್ಲಿ ರಾಮನಾಗಿ ರಣ್‌ಬೀರ್ ಕಪೂರ್, ಜಾನಕಿಯಾಗಿ ಸಾಯಿ ಪಲ್ಲವಿ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಕಣ್ಣುಕಟ್ಟುವಂತೆ ಕಾಣಿಸಿಕೊಂಡಿದ್ದಾರೆ. ‘ಧರ್ಮದಲ್ಲಿ ಎಂದೆಂದಿಗೂ ಒಟ್ಟಿಗೆ’ ಎಂಬ ಅರ್ಥಪೂರ್ಣ ಕ್ಯಾಪ್ಷನ್‌ನೊಂದಿಗೆ ಬಿಡುಗಡೆಯಾಗಿರುವ ಈ ಪೋಸ್ಟರ್‌ನಲ್ಲಿ ಮೂವರೂ ಅತ್ಯಂತ ಸರಳ ಹಾಗೂ ಸಾಂಪ್ರದಾಯಿಕ ಉಡುಪಿನಲ್ಲಿ ಮನಸೆಳೆಯುತ್ತಿದ್ದಾರೆ.

ಇನ್ನು ದಕ್ಷಿಣ ಭಾರತದ ಸೂಪರ್‌ಸ್ಟಾರ್ ಯಶ್ ಅವರ ಪ್ರತ್ಯೇಕ ಪೋಸ್ಟರ್‌ಗೆ ವಿಶ್ವದಾದ್ಯಂತ ಅಭೂತಪೂರ್ವ ಪ್ರಶಂಸೆ ವ್ಯಕ್ತವಾಗುತ್ತಿದೆ. ‘ಮೂರು ಲೋಕಗಳ ಅಧಿಪತಿ, ರಾವಣ’ ಮತ್ತು ‘ನಮ್ಮ ಸತ್ಯ. ನಮ್ಮ ಇತಿಹಾಸ’ ಎಂಬ ಶೀರ್ಷಿಕೆಯಡಿ ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ಯಶ್ ಕಪ್ಪು ವಸ್ತ್ರ ಧರಿಸಿ, ಬಂಗಾರದ ಆಭರಣಗಳಿಂದ ಅಲಂಕೃತರಾಗಿ ಸುವರ್ಣ ಲಂಕೆಯ ಅರಮನೆಯ ಮುಂದೆ ನಿಂತಿದ್ದಾರೆ. ರಾವಣನ ಪಾತ್ರಕ್ಕೆ ಬೇಕಾದ ಭಯಾನಕತೆ, ರಾಜಗಾಂಭೀರ್ಯ ಮತ್ತು ದೈತ್ಯ ವ್ಯಕ್ತಿತ್ವವನ್ನು ಯಶ್ ತಮ್ಮ ನೋಟದಲ್ಲೇ ತಂದಿದ್ದು, ಅವರ ಈ ಹೊಸ ಅವತಾರಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಭಾರತದ ಇತಿಹಾಸದಲ್ಲೇ ಅತಿ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಜಾಗತಿಕ ಮಟ್ಟದ ತಾಂತ್ರಿಕ ಸ್ಪರ್ಶ ನೀಡಲಾಗುತ್ತಿದೆ. ಜಗತ್ತಿನ ಶ್ರೇಷ್ಠ ಸಂಗೀತ ನಿರ್ದೇಶಕರಾದ ಹಾನ್ಸ್ ಜಿಮ್ಮರ್ ಹಾಗೂ ಭಾರತದ ಹೆಮ್ಮೆ ಎ.ಆರ್. ರೆಹಮಾನ್ ಒಟ್ಟಾಗಿ ಈ ಸಿನಿಮಾಗೆ ಸಂಗೀತ ಸಂಯೋಜಿಸುತ್ತಿರುವುದು ಚಿತ್ರದ ಮತ್ತೊಂದು ಪ್ರಮುಖ ಆಕರ್ಷಣೆ.

ವಿದೇಶಗಳಲ್ಲೂ ಭಾರಿ ಪ್ರಮಾಣದಲ್ಲಿ ಪ್ರಚಾರ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲು ಸ್ಥಾಪಿಸಲು ವೇದಿಕೆ ಸಿದ್ಧವಾಗಿದೆ. ಸಂಸ್ಕೃತಿ, ತಂತ್ರಜ್ಞಾನ ಮತ್ತು ಅದ್ಭುತ ತಾರಾಗಣದ ಸಂಗಮವಾಗಿರುವ ಈ ಮಹಾಕಾವ್ಯವು ಮುಂಬರುವ ದೀಪಾವಳಿ ಹಬ್ಬದ ಶುಭ ಸಂದರ್ಭದಲ್ಲಿ ಪ್ರಪಂಚದಾದ್ಯಂತ ಬೆಳ್ಳಿತೆರೆಗೆ ಅಪ್ಪಳಿಸಲಿದೆ.

Must Read