ಹೊಸದಿಗಂತ ವರದಿ, ವಿಜಯಪುರ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಂಚಮಸಾಲಿ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಬಿಜೆಪಿಯನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಿರಾದಾರ ಆರೋಪಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಸಾಮಾಜಿಕ ಹೋರಾಟ ಆಗಬೇಕೇ ಹೊರತು, ಕೇವಲ ಒಂದು ರಾಜಕೀಯ ಹೋರಾಟ ಆಗಬಾರದು ಎಂದರು.
ಪಂಚಮಸಾಲಿ ಸಮಾಜ ತನ್ನದೇ ಆದ ಶಿಸ್ತು, ಒಗ್ಗಟ್ಟಿನಿಂದ ಕೂಡಿದೆ, ಅಲ್ಲದೆ ಶಾಂತಿ, ಸಮಾಧಾನದಿಂದ 2 ಎ ಮೀಸಲಾತಿಗಾಗಿ ಸಮಾಜದವರು ಹೋರಾಟ ನಡೆಸುತ್ತಿದ್ದಾರೆ ಎಂದರು.
ಯತ್ನಾಳರು ಬ್ಲ್ಯಾಕ್ ಮೇಲೆ ಹೋರಾಟವನ್ನು ಬಿಟ್ಟು, ಸಮಾಧಾನ ರೀತಿಯಲ್ಲಿ ಹೋರಾಟಕ್ಕೆ ಮುಂದಾಗಬೇಕು. ಪಂಚಮಸಾಲಿ ಮೂರೂ ಪೀಠಗಳು ಸಮಾಜದ ಶಕ್ತಿಯಾಗಿದ್ದು, ಎಲ್ಲ ಶ್ರೀಗಳ ಮಾರ್ಗದರ್ಶನ ಹಾಗೂ ಎಲ್ಲರ ವಿಶ್ವಾಸದಿಂದ ಮುನ್ನೆಡೆದಾಗಿ, ಗುರಿ ಮುಟ್ಟಲು ಸಾಧ್ಯ ಎಂದರು.
ಯತ್ನಾಳರು ಈ ಹಿಂದೆ, ಬಿಜೆಪಿ ನಾಯಕರ ವಿರುದ್ಧ ಮಾತನಾಡುತ್ತಲೇ ಬಂದಿದ್ದಾರೆ, ಪ್ರಧಾನಿ ಮೋದಿ, ಸಂತೋಷಜಿ, ಪ್ರಹ್ಲಾದ ಜೋಶಿ, ಅಮಿತ್ ಶಾ, ಜೆ.ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೀಗೆ ಎಲ್ಲ ನಾಯಕರ ವಿರುದ್ಧ ಮಾತನಾಡುತ್ತಲೇ ಬಂದಿದ್ದಾರೆ. ಯತ್ನಾಳರು ಇದೇ ರೀತಿ ಹೇಳಿಕೆ ನೀಡುತ್ತ ಹೋದರೆ, ಪಂಚಮಸಾಲಿ ಸಮಾಜವನ್ನು ಯಾರೂ ನಂಬದ ಸ್ಥಿತಿ ಎದುರಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖಂಡ ಭೀಮಾಶಂಕರ ಹದನೂರ ಮಾತನಾಡಿ, ಯತ್ನಾಳರು ಸಚಿವ ಸ್ಥಾನಕ್ಕಾಗಿ ಪಂಚಮಸಾಲಿ ಸಮಾಜವನ್ನು ದುರುಪಯೋಗ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ಪಂಚಮಸಾಲಿ ಸಮಾಜದ ಬಗ್ಗೆ ಈ ಮೊದಲು ಇಲ್ಲದ ಕಾಳಜಿ ಈಗ ಹೇಗೆ ಬಂತು ? ತಮ್ಮನ್ನು ತಾವೇ ಹೊಗಳಿಕೊಂಡು, ಮತ್ತೊಬ್ಬರನ್ನು ತೆಗಳುವುದು ಸರಿಯಲ್ಲ ಎಂದರು.
ರವಿ ಮುಕರ್ತಿಹಾಳ, ವಿಜಯ ಜೋಶಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ