ಹೊಸದಿಗಂತ ವರದಿ ವಿಜಯಪುರ :
ನನ್ನ ಮೇಲೆ ಬಹಳ ಪ್ರೀತಿಯಿರುವುದರಿಂದ ಬಾದಾಮಿಯಲ್ಲಿ ಸ್ಪರ್ಧೆ ಮಾಡುವಂತೆ ಪಾಪ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅವರಿಗೆ ಧನ್ಯವಾದಗಳು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಾದಾಮಿಯಲ್ಲಿ ಗೆಲ್ಲಲ್ಲಾ ಅಂತಲ್ಲ. ಬಾದಾಮಿಯಲ್ಲಿ ನೂರಕ್ಕೆ 100ರಷ್ಟು ಗೆದ್ದೇ ಗೆಲ್ಲುತ್ತೀನಿ ಗೊತ್ತಾಯ್ತಾ ? ಐದು ವರ್ಷ ಶಾಸಕನಾಗಿ ಆ ಜನರಿಗೆ ಕೆಲಸ ಮಾಡಿದ್ದೀನಿ. ಅವರ ಕಷ್ಟ ಸುಖಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದೇನೆ. ಹೀಗಾಗಿ ಜನರಿಗೆ ದ್ರೋಹ ಮಾಡೋ ಪ್ರಶ್ನೆ ಬರೋದಿಲ್ಲ ಎಂದರು.
ಯಡಿಯೂರಪ್ಪಗೆ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ ಮೇಲೆ ಸ್ವಲ್ಪ ಡಿಸ್ಟರ್ಬ್ ಆಗಿದ್ದಾರೆ. ದೇವರು ಅವರಿಗೆ ಆಯುಷ್ಯ, ಆರೋಗ್ಯ ಕೊಡಲಿ ಎಂದು ಪ್ರಾರ್ಥಿಸುವೆ ಎಂದರು.
ನಾನು ಎಲ್ಲಿ ನಿಲ್ಲುತ್ತೀನಿ ಅನ್ನೊದು ನಾನು ತೀರ್ಮಾನ ಮಾಡಬೇಕು. ನಾನು ಎಲ್ಲಿ ನಿಲ್ಲುತ್ತೀನಿ ಅನ್ನೋದನ್ನ ನಾನು ಹೇಳುತ್ತೀನಿ. ಅದರ ಮೇಲೆ ಕಾಂಗ್ರೆಸ್ ತೀರ್ಮಾನ ಮಾಡುತ್ತದೆ. ಯಡಿಯೂರಪ್ಪ ಯಾರು ತೀರ್ಮಾನ ಮಾಡೋಕೆ ? ಎಂದು ಪ್ರಶ್ನಿಸಿದರು.