April 29, 2026
Wednesday, April 29, 2026
spot_img

ಯಡಿಯೂರಪ್ಪ ಜನರಿಂದ ಆಯ್ಕೆಯಾದ ಪರಿಶ್ರಮದ ಮುಖ್ಯಮಂತ್ರಿ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

ಹೊಸದಿಗಂತ ವರದಿ, ಚಿತ್ರದುರ್ಗ :

ಬಿಎಸ್.ಯಡಿಯೂರಪ್ಪನವರು ಅದೃಷ್ಟದ ಮುಖ್ಯಮಂತ್ರಿಯಲ್ಲ, ಜನರಿಂದ ಆಯ್ಕೆಯಾದ ಪರಿಶ್ರಮದ ಮುಖ್ಯಮಂತ್ರಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ೫೦ ವರ್ಷದ ರಾಜಕೀಯ ಜೀವನದ ಹಿನ್ನಲೆಯಲ್ಲಿ ಮೇ ೯ ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಅಭಿಮಾನೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪನವರು ಅಧಿಕಾರಕ್ಕಾಗಿ ಬಂದವರಲ್ಲ. ಕರ್ನಾಟಕ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದೇ ತರುತ್ತೇನೆ ಎಂಬ ಹಠದಲ್ಲಿ ರಾಜ್ಯದಲ್ಲಿ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತಂದರು ಎಂದರು.

ಇಂದಿನ ಯುವ ರಾಜಕಾರಣಿಗಳಿಗೆ ಹಾಗೂ ಯುವ ಪೀಳಿಗೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ದಾರಿ ದೀಪವಾಗಿದ್ದಾರೆ. ಅವರ ೫೦ ವರ್ಷದ ರಾಜಕೀಯ ಜೀವನ ಬೇರೆಯವರಿಗೆ ಮಾರ್ಗದರ್ಶನ ವಾಗಬೇಕಿದೆ. ಯಡಿಯೂರಪ್ಪನವರೆಂದರೆ ರಾಜ್ಯದಲ್ಲಿ ಹೋರಾಟ ನಡೆಸುವ ವ್ಯಕ್ತಿ ಎಂದು ಗುರುತಿಸಲಾಗಿದೆ. ಬಿಎಸ್.ವೈ. ಎಂದರೆ ಹೋರಾಟ ಎಂಬ ಮನೋಭಾವ ಎಲ್ಲರಲ್ಲೂ ಮೂಡುತ್ತದೆ ಎಂದು ಹೇಳಿದರು.

ಜನಸೇವೆಗಾಗಿಯೇ ತಮ್ಮ ಜೀವನನ್ನೇ ಮುಡುಪಾಗಿಟ್ಟಿದ್ದಾರೆ. ದಲಿತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮಹಿಳೆಯರಿಗೆ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಅಧಿಕಾರಕ್ಕಾಗಿ ಎಂದೂ ಹೋರಾಟ ಮಾಡಲಿಲ್ಲ. ಬಡವರ ಕಣ್ಣಿರು ಒರೆಸುವ ಕೆಲಸ ಮಾಡಿದ್ದಾರೆ. ೫೦ ವರ್ಷ ಬಡವರ ಪರವಾಗಿ ಕೆಲಸ ಮಾಡಿದ್ದಾರೆ. ಸೈಕಲ್ ಮೇಲೆ ರಾಜ್ಯ ಪ್ರವಾಸ ಮಾಡಿ, ಪಕ್ಷ ಕಟ್ಟಿ ಬೆಳೆಸಿದ ಅವರ ಹೋರಾಟ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ. ಜನರ ಪ್ರೀತಿ ವಿಶ್ವಾಸದ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ಮಾಡಿದ್ದಾರೆ ಎಂದರು.
ಮೇ ೮ ರಂದು ಮೈಸೂರು ದಸರಾ ಅಂಬಾರಿ ಮೆರವಣಿಗೆ ರೀತಿಯಲ್ಲಿ ಯಡಿಯೂರಪ್ಪನವರ ಪುರಪ್ರವೇಶ ಕಾರ್ಯಕ್ರಮ ನಡೆಯಲಿದೆ. ವಿವಿಧ ಜಾನಪದ ಕಲಾ ತಂಡಗಳು ಭಾಗವಹಿಸಲಿವೆ. ಈ ಸಮಯದಲ್ಲಿ ವಿವಿಧ ರೀತಿಯ ಜಾನಪದ ಕಲಾ ಮೇಳಗಳು, ಸ್ಥಬ್ದ ಚಿತ್ರಗಳು ಇರಲಿವೆ. ಮೇ.೯ ರಂದು ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸುವರು. ಅಲ್ಲದೇ ಯಡಿಯೂರಪ್ಪ ಅವರನ್ನು ಸನ್ಮಾನಿಸಲಿದ್ದಾರೆ ಎಂದರು.

ಕೊಪ್ಪಳ, ವಿಜಯನಗರ, ಬಳ್ಳಾರಿಯ ಮುಖಂಡರು ಶ್ರೀಗಳನ್ನು ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಈ ಮೂರು ಜಿಲ್ಲೆಗಳಿಂದಲೇ ಸುಮಾರು ೧.೫೦ ಲಕ್ಷ ಜನ ಬರುವವರಿದ್ದಾರೆ. ಈ ಕಾರ್ಯಕ್ರಮದಲ್ಲಿ ಯಡಿಯೂರಪ್ಪನವರು ಪ್ರಾರಂಭದಲ್ಲಿ ಬಳಸಿದ ಅಂಬಾಸಿಡರ್ ಕಾರನ್ನು ಇಲ್ಲಿಗೆ ತರಲಾಗುವುದು. ಜನರು ಈ ಕಾರನ್ನು ನೋಡಲು ಅವಕಾಶ ಕಲ್ಪಿಸಲಾಗಿದೆ. ಇದು ಬಿಜೆಪಿ ಯಡಿಯೂರಪ್ಪನವರ ಅಭಿಮಾನಿಗಳು ಹಾಗೂ ಹಿರಿಯರು ಸೇರಿಕೊಂಡು ಅಭಿಮಾನದಿಂದ ಮಾಡುತ್ತಿರುವ ಕಾರ್ಯಕ್ರಮ. ಇದರಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಸಹ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಆಗಮಿಸುವ ಅಮಿತ್ ಶಾ ಅವರಿಗೆ ಗೋ ಬ್ಯಾಕ್ ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕಾಂಗ್ರೆಸ್ ಪ್ರೇರಿತವಾದ ಕಾರ್ಯವಾಗಿರಬಹುದು. ಅಮಿತ್ ಶಾ ಅವರು ಭರವಸೆ ನೀಡಿದ್ದಾರೆಂದರೆ ಅದನ್ನು ಈಡೇರಿಸುತ್ತಾರೆ ಎಂಬ ಭರವಸೆ ನನಗಿದೆ. ಇದರಿಂದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗುವುದಿಲ್ಲ ಎಂಬ ವಿಶ್ವಾಸ ವಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಟಿ.ಕುಮಾರಸ್ವಾಮಿ, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ರಾಜ್ಯ ಕಾರ್ಯದರ್ಶಿ ರಮೇಶ್ ಗೌಡ್ರು, ವಿಭಾಗ ಸಹಾ ಪ್ರಭಾರಿ ಎ.ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಧುರಿ ಗಿರೀಶ್, ವೆಂಕಟೇಶ್ ಯಾದವ್, ಮೋಹನ್ ಕುಮಾರ್, ವೀರಶೈವ ಬ್ಯಾಂಕ್ ಅಧ್ಯಕ್ಷ ಪಟೇಲ್ ಶಿವಕುಮಾರ್, ನಗರಸಭೆ ಮಾಜಿ ಸದಸ್ಯರಾದ ಬಿ.ಸುರೇಶ್, ಮಾಜಿ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್‌ಕುಮಾರ್, ಜಿಲ್ಲಾ ವಕ್ತಾರ ನಾಗರಾಜ್ ಬೇದ್ರೆ, ಎಸ್.ಸಿ.ಮೋರ್ಚಾದ ಅಧ್ಯಕ್ಷ ಪರಶುರಾಮ್, ನಂದಿ ನಾಗರಾಜ್, ರಾಜ್ಯ ರೈತ ಮೋರ್ಚಾದ ಮಲ್ಲಿಕಾರ್ಜನ್ ಸೇರಿದಂತೆ ಇತರರು ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !