ಹೊಸದಿಗಂತ ಡಿಜಿಟಲ್ ಡೆಸ್ಕ್
ಅಡಿಲೇಡ್‌ನಲ್ಲಿ ನಡೆದ ಎರಡನೇ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 10 ವಿಕೆಟ್‌ಗಳ ಹೀನಾಯ ಸೋಲುಂಡು ನಂತರ ಟಿ20 ವಿಶ್ವಕಪ್‌ನಿಂದ ನಿರ್ಗಮಿಸಿದ ಟೀಂ ಇಂಡಿಯಾವನ್ನು ಟೀಕಿಸಿರುವ ಲೆಜೆಂಡರಿ ಕ್ರಿಕೆಟಿಗ, 1983 ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್, ಪ್ರಸ್ತುತ ಭಾರತ ತಂಡವನ್ನು “ಚೋಕರ್ಸ್” ಎಂದು ಕರೆದಿದ್ದಾರೆ.
ಈ ವಿಶ್ವಕಪ್ ನ ಭಾರೀ ಸೋಲಿನೊಂದಿಗೆ ಕಳೆದ ಆರು ವಿಶ್ವಕಪ್‌ಗಳಲ್ಲಿ ಭಾರತ ಐದನೇ ನಾಕೌಟ್ ಪಂದ್ಯ ಸೋತಂತಾಗಿದೆ. 2013 ರಿಂದ ಪ್ರಶಸ್ತಿ ಗೆಲ್ಲಲು ಕಾಯುತ್ತಿರುವ ಟೀಂ ಇಂಡಿಯಾ ನಾಕೌಟ್ ಕಂಟಕವನ್ನು ದಾಟಲು ಮತ್ತೊಮ್ಮೆ ವಿಫಲವಾಗಿದೆ.
“ನಾನು ವಿವರಗಳಿಗೆ ಹೋಗುವುದಿಲ್ಲ ಮತ್ತು ಅವರನ್ನು ದೂಷಿಸುವುದೂ ಇಲ್ಲ. ಅವರೆಲ್ಲ ನಮಗೆ ಸಾಕಷ್ಟು ಗೌರವವನ್ನು ಗಳಿಸಿಕೊಟ್ಟ ಆಟಗಾರರು. ಆದರೆ ನಾವು ಅವರನ್ನು ʼಹೊಸ ಚೋಕರ್‌ಗಳುʼ ಎಂದು ಕರೆಯಬಹುದು. ಪ್ರಸ್ತುತ ಭಾರತ ಸೋಲುವುದನ್ನು ಗಮನಿಸಿದರೆ ಹಾಗೆಂದು ಕರೆಯದಿರಲು ಸಾಧ್ಯವಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದಾಗ್ಯೂ, ಸೆಮಿಫೈನಲ್‌ನಲ್ಲಿ ತಂಡದ ಪ್ರದರ್ಶನವನ್ನು ಅಭಿಮಾನಿಗಳು ಹೆಚ್ಚು ಟೀಕಿಸಬಾರದು ಎಂದು ಅವರು ಮನವಿ ಮಾಡಿದ್ದಾರೆ. “ಭಾರತವು ಕೆಟ್ಟ ಕ್ರಿಕೆಟ್ ಆಡಿದೆ ಎಂಬುದನ್ನು ನಾನು ಒಪ್ಪುತ್ತೇನೆ. ನಾವು ಕೇವಲ ಒಂದು ಪಂದ್ಯದ ಆಧಾರದ ಮೇಲೆ ಅವರನ್ನು ಅತಿಯಾಗಿ ಟೀಕಿಸಬಾರದು. ಯುವ ಕ್ರಿಕೆಟಿಗರು ಈಗಲೇ ಮುಂದೆ ಬಂದು ತಂಡವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯವ ಸಮಯ ಇದು” ಎಂದು ಕಪಿಲ್ ಹೇಳಿದ್ದಾರೆ.
ಭಾರತ ಕೊನೆಯ ಬಾರಿಗೆ 2013 ರಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಅಂದಿನಿಂದ, ಅವರು 2014 T20 ವಿಶ್ವಕಪ್ (ಫೈನಲ್), 2015 ODI ವಿಶ್ವಕಪ್ (ಸೆಮಿಫೈನಲ್), 2016 T20 ವಿಶ್ವಕಪ್ (ಸೆಮಿಫೈನಲ್), 2017 ಚಾಂಪಿಯನ್ಸ್ ಟ್ರೋಫಿ (ಫೈನಲ್), 2019 ರ ಏಕದಿನ ವಿಶ್ವಕಪ್ (ಸೆಮಿಫೈನಲ್) ನಾಕೌಟ್ ಹಂತಗಳಲ್ಲಿ ಸೋತು ಹೊರಬಿದ್ದಿದೆ. 2021 ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, 2022 ಟಿ 20 ವಿಶ್ವಕಪ್ (ಸೆಮಿಫೈನಲ್), ಅನ್ನೂ ಕೂಡ ಕಳೆದುಕೊಂಡಿದೆ.
ಆರಂಭಿಕ ಅಲೆಕ್ಸ್ ಹೇಲ್ಸ್ ಮತ್ತು ನಾಯಕ ಜೋಸ್ ಬಟ್ಲರ್ ಅಜೇಯ ಅರ್ಧಶತಕಗಳ ನೆರವಿನಿಂದ ಇಂಗ್ಲೆಂಡ್ ಕೇವಲ 16 ಓವರ್‌ಗಳಲ್ಲಿ 169 ರನ್ ಗಳಿಸುವ ಮೂಲಕ ಭಾರತವನ್ನು ಟೂರ್ನಿಯಿಂದ ಹೊರಹಾಕಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ