ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಸೈಬರ್ ಕ್ರೈಮ್‌ಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದೀಗ ಸೈಬರ್ ಕಳ್ಳರು ಕರ್ನಾಟಕ ರಾಜ್ಯ ಪೊಲೀಸ್ ಹೆಸರನ್ನು ಬಳಸಿಕೊಂಡು ಅಮಾಯಕರಿಂದ ಹಣ ಪೀಕುತ್ತಿದ್ದಾರೆ.
ನಿಖರವಾದ ವಾಹನ ಹಾಗೂ ಮೊಬೈಲ್ ಸಂಖ್ಯೆಯನ್ನು ಅವರು ಹೊಂದಿದ್ದಾರೆ. ನಿಮ್ಮ ವಾಹನದ ವಿರುದ್ಧ ಸಂಚಾರ ನಿಯಮ ಉಲ್ಲಂಘನೆ ದೂರು ದಾಖಲಾಗಿದೆ ಎನ್ನುವ ವಾಟ್ಸಾಪ್ ಸಂದೇಶ ಬರುತ್ತದೆ.
ಚಲನ್‌ನಲ್ಲಿ ಯಾವ ದಿನಾಂಕ, ಯಾವ ಸಮಯದಲ್ಲಿ ಹಾಗೂ ಗಾಡಿ ಸಂಖ್ಯೆಯನ್ನು ನಿಖರವಾಗಿ ಕಳುಹಿಸಿ ಜನರು ನಂಬುವಂತೆ ಮಾಡುತ್ತಾರೆ. ನಂತರ ವಾಹನ್ ಪರಿವಾಹನ್ ಆಪ್ ಮೂಲಕ ಉಳಿದ ಮಾಹಿತಿ ಪಡೆದುಕೊಳ್ಳಿ ಎಂದು ಹೇಳುತ್ತಾರೆ. ಆದರೆ ಅಲ್ಲಿ ಯಾವುದೇ ಮಾಹಿತಿ ಲಭ್ಯವಾಗೋದಿಲ್ಲ. ಹಣ ಭರ್ತಿ ಮಾಡಲು ಲಿಂಕ್ ಕ್ಲಿಕ್ ಮಾಡಿದ ನಂತರ ನಿಮ್ಮ ಬ್ಯಾಂಕ್ ಖಾತೆಯನ್ನು ಹ್ಯಾಕ್ ಮಾಡಿ ಹಣ ದೋಚುತ್ತಾರೆ.
ಈ ರೀತಿ ಮೆಸೇಜ್ ಬಂದ ತಕ್ಷಣ ನಂಬರ್ ಬ್ಲಾಕ್ ಮಾಡಿ ೧೯೩೦ಗೆ ಕರೆ ಮಾಡಿ. ಈ ಬಗ್ಗೆ ನಿಖರವಾದ ಮಾಹಿತಿ ತಿಳಿಯಲು ಸರ್ಕಾರದ ಅಧಿಕೃತ ವೆಬ್‌ಸೈಟ್ btp.gov.in ಗೆ ಭೇಟಿ ನೀಡಿ, ಕರ್ನಾಟಕ ರಾಜ್ಯ ಪೊಲೀಸರ ಅಧಿಕೃತ ಅಪ್ಲಿಕೇಶನ್ ನ್ನು ಡೌನ್‌ಲೋಡ್ ಮಾಡಿ, ಬೆಂಗಳೂರಿನ ಇನ್ ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಖುದ್ದು ಭೇಟಿ ನೀಡಿ ಸಂಚಾರ ನಿಯಮ ಉಲ್ಲಂಘನೆ ದಂಡ ಪಾವತಿಸಿ.