‘ನೀವೂ ಗೆಲ್ಲಬಹುದು’ ಕೃತಿ ಬಿಡುಗಡೆ: ಮಕ್ಕಳಲ್ಲಿ ಚೈತನ್ಯ ಬಿತ್ತುವ ಕೃತಿ ಎಂದ ಪ್ರಕಾಶ ಕಡಮೆ

ಹೊಸದಿಗಂತ ವರದಿ,ಹುಬ್ಬಳ್ಳಿ:

ಹದಿಹರೆಯದವರ ಕನಸು ಮತ್ತು ಕನವರಿಕೆಗೆ ಇಂಬು ಕೊಡುತ್ತಲೇ ಅವರನ್ನು ಕೀಳರಿಮೆಯಿಂದ ಹೊರ ತರುವ ಪ್ರಯತ್ನವನ್ನು ನೀವೂ ಗೆಲ್ಲಬಹುದು ಕೃತಿಯ ಮೂಲಕ ಲೇಖಕರು ಮಾಡಿದ್ದಾರೆ ಎಂದು ಹಿರಿಯ ಸಾಹಿತಿ ಪ್ರಕಾಶ ಕಡಮೆ ಹೇಳಿದರು.
ಅವರು ಭಾನುವಾರ ಪುಸ್ತಕ ಬಳಗದ ವತಿಯಿಂದ ಏರ್ಪಡಿಸಿದ್ದ ಲೇಖಕಿ- ಶಿಕ್ಷಕಿ ಕವಿತಾ ಹೆಗಡೆ ಅಭಯಂ ಅವರ ನೀವೂ ಗೆಲ್ಲಬಹುದು ಎಂಬ ಕೃತಿಯನ್ನು ಗೂಗಲ್ ಮೀಟ್‌ನಲ್ಲಿ ಬಿಡುಗಡೆ ಮಾಡಿ ಮಾತನಾಡಿದರು. ಮಕ್ಕಳು ಯಾವ ದಾರಿಯಲ್ಲಿ ಬೆಳೆಯಬೇಕಿತ್ತೋ ಅದನ್ನು ಬಿಟ್ಟು ಬರೇ ಅಂಕದ ಹಿಂದೆ ಓಡುತ್ತಿದ್ದಾರೆ. ಇಂತಹ ಸ್ಥಿತಿಯಲ್ಲಿ ಲೇಖಕರು ಈ ಕೃತಿಯಲ್ಲಿ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಅಗತ್ಯವುಳ್ಳ ಮಾಹಿತಿ ಒದಗಿಸಿದ್ದಾರೆ. ಮಗು ಮತ್ತು ಮಗುವಿನ ಮನಸ್ಸಿಗೆ ತಂಪು, ಇಂಪು ನೀಡುವ ಉತ್ತಮ ಕೃತಿ ಇದಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಪ್ರಾಧ್ಯಾಪಕ , ಲೇಖಕ ಡಾ. ಅಶೋಕ ನರೋಡೆ ಮಾತನಾಡಿ, ಬಾಲ್ಯದ ಮನಸುಗಳಿಗೆ ಅಗತ್ಯವಿರುವ ಅಮೂಲ್ಯ ಲೇಖನಗಳು ಈ ಕೃತಿಯಲ್ಲಿದ್ದು, ಇದನ್ನು ಮಕ್ಕಳ ಜೊತೆಗೆ ಪಾಲಕರು, ಶಿಕ್ಷಕರು ಓದಲೇಬೇಕು. ಮಕ್ಕಳ ಮನೋವಿಕಸನಕ್ಕೆ ಅಗತ್ಯವಿರುವ ಜ್ಞಾನ, ಅಭಿರುಚಿಯನ್ನು ಈ ಕೃತಿ ನೀಡುತ್ತದೆ. ಸುಂದರ, ಸಮೃದ್ಧ ಸಮಾಜ ನಿರ್ಮಾಣಕ್ಕೆ ಇಂತಹ ಕೃತಿಗಳ ಅಗತ್ಯತೆ ಇದೆ. ಕವಿತಾ ಹೆಗಡೆ ಅಭಯಂ ಅವರಿಂದ ಇನ್ನೂ ಉತ್ತಮ ಕೃತಿಗಳು ಹೊರ ಬರಲಿ ಎಂದು ಹಾರೈಸಿದರು.  ವಿಶೇಷ ಆಹ್ವಾನಿತರಾಗಿದ್ದ ಪತ್ರಕರ್ತ ವಿಠ್ಠಲದಾಸ ಕಾಮತ್ ಮಾತನಾಡಿ ಶುಭಕೋರಿದರು.
ಸ್ಪರ್ಧೆಯ ತವಕ :  
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸುರೇಶ ಹೆಗಡೆ ಮಾತನಾಡಿ, ನಮ್ಮಲ್ಲಿ ನಾವು ಪ್ರೀತಿ, ಸಂತೋಷವನ್ನು ಕಂಡುಕೊಳ್ಳದಿದ್ದರೆ ಸಮಾಜವನ್ನು ಮುನ್ನಡೆಸುವುದು ಹೇಗೆ?. ಇಂದು ಮಕ್ಕಳಲ್ಲಿ ನಗುವನ್ನೇ ಕಾಣುತ್ತಿಲ್ಲ. ಕೇವಲ ಸ್ಪರ್ಧೆಯ ಹಿಂದೆ ಲಂಗು ಲಗಾಮಿಲ್ಲದೇ ಓಡುವುದನ್ನು ನಾವು ಅವರಲ್ಲಿ ಬಿತ್ತಿದ್ದೇವೆ. ಇದಕ್ಕೆ ನಮ್ಮ ಮನೋಭಾವ ಕಾರಣ. ಮಕ್ಕಳನ್ನು ಬಾಹ್ಯ ಜಗತ್ತಿನ ಸಂಪರ್ಕದಿಂದಲೇ ದೂರ ಮಾಡುತ್ತಿದ್ದೇವೆ. ಇದು ಬದಲಾಗಬೇಕು. ಬದಲಾಗಬೇಕಾದರೆ, ಇಂತಹ ಮನೋವಿಕಾಸದ ಕೃತಿಗಳ ಅಗತ್ಯವಿದೆ ಎಂದರು. ಲೇಖಕಿ ಸುಚಿತ್ರಾಹೆಗಡೆ ಸ್ವಾಗತಿಸಿ ಪರಿಚಯಿಸಿದರು. ಲೇಖಕಿ ಕವಿತಾ ಹೆಗಡೆ ಅಭಯಂ ಮಾತನಾಡಿ ಈ ಕೃತಿ ರಚನೆಗೆ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದರು. ಕುಮಾರಿ ಸಾನಿಕಾ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.  ನ್ಯಾಯವಾದಿ ಎಸ್.ಕೆ ಹೆಗಡೆ ವಂದಿಸಿದರು. ಪತ್ರಕರ್ತ ವೈ.ಎಂ. ಕೋಲಕಾರ, ಪ್ರಕಾಶ ಚೇತನ ಕಣಬೂರ್ ಮತ್ತಿತರರು ಇದ್ದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!