ಹೊಸದಿಗಂತ ವರದಿ ತುಮಕೂರು:
ತೋಟದಲ್ಲಿ ತೆಂಗಿನ ಕಾಯಿ ಕೀಳುವ ಸಂದರ್ಭದಲ್ಲಿ ತೋಟದಲ್ಲಿ ಹಾದು ಹೋಗಿದ್ದ ವಿದ್ಯುತ್ ಲೈನ್ ದೋಟಿಗೆ ತಗುಲಿ ತಂದೆಯ ಕಣ್ಮುಂದೆಯೇ ಮಗ ದಾರುಣವಾಗಿ ಸಾವನ್ನಪ್ಪಿದ ಘಟನೆ ಗುಬ್ಬಿ ತಾಲ್ಲೂಕಿನ ಕಡಬ ಹೋಬಳಿಯ ಕುಣಾಘಟ್ಟ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮೃತನನ್ನು ಪ್ರೀತಂ (19) ಎಂದು ಗುರುತಿಸಲಾಗಿದೆ. ಈತ ತುಮಕೂರಿನ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ರಜೆ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದ ಎನ್ನಲಾಗಿದೆ.
ತೋಟದಲ್ಲಿ ತೆಂಗಿನ ಕಾಯಿ ಕೀಳುವ ವೇಳೆ ಬಳಸುತ್ತಿದ್ದ ದೋಟಿಗೆ ಆಕಸ್ಮಿಕವಾಗಿ ವಿದ್ಯುತ್ ತಗುಲಿದ್ದು, ತೀವ್ರವಾಗಿ ಗಾಯಗೊಂಡ ಪ್ರೀತಂ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಗ್ರಾಮಸ್ಥರ ಮನಕಲಕುವಂತಿತ್ತು. ಇತ್ತೀಚೆಗೆ ಇಂತಹ ಪ್ರಕರಣಗಳು ಸಾಕಷ್ಟು ತಾಲ್ಲೂಕಿನಲ್ಲಿ ನಡೆಯುತ್ತಿದ್ದರೂ ರೈತ ಸಮುದಾಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳುವಲ್ಲಿ ಎಡವುತ್ತಿರುವುದು ಕಂಡುಬರುತ್ತಿದೆ. ಮುಂದಾದರೂ ವಿದ್ಯುತ್ ಲೈನ್ ಪಕ್ಕದಲ್ಲಿ ದೋಟಿ ಬಳಸುವಾಗ ಮುನ್ನೆಚ್ಚರಿಕೆ ತೆಗೆದುಕೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.
ಇದನ್ನೂ ಓದಿ:
ಮೃತದೇಹವನ್ನು ಗುಬ್ಬಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.



