ಕೆಲಸದ ಒತ್ತಡದಿಂದ ಯುವತಿ ಸಾವು: ತನಿಖೆ ಕೈಗೆತ್ತಿಕೊಂಡ ಕೇಂದ್ರ ಸರ್ಕಾರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲಸದ ಒತ್ತಡದಿಂದಾಗಿ ಕಂಪನಿಯೊಂದರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಯುವತಿ ಸಾವನ್ನಪ್ಪಿದ್ದಾರೆ.

ಇತ್ತ ಯುವತಿ ಸಾವು ಭಾರಿ ಆಕ್ರೋಶ ಕಾರಣವಾಗಿದೆ. ಕೆಲಸದ ಒತ್ತಡದಿಂದ ಮಗಳು ದುರಂತ ಸಾವಿಗೀಡಾಗಿದ್ದಾಳೆಂದು ತಾಯಿ ಗಂಭೀರ ಆರೋಪ ಮಾಡಿದ್ದಾರೆ.
26 ವರ್ಷದ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌, ಕೆಲಸಕ್ಕೆ ಸೇರಿದ ನಾಲ್ಕು ತಿಂಗಳಲ್ಲೇ ಸಾವನ್ನಪ್ಪಿದ್ದಾರೆ. ನನ್ನ ಮಗಳಿಗೆ ಕೆಲಸದ ಒತ್ತಡ ಹೆಚ್ಚಿತ್ತು. ಹೀಗಾಗಿ ಅವಳು ಮೃತಪಟ್ಟಿದ್ದಾಳೆಂದು ಆಕೆಯ ತಾಯಿ ಆರೋಪಿಸಿದ್ದಾರೆ.

ಅನ್ನಾ ಸೆಬಾಸ್ಟಿಯನ್‌ ಸಾವಿನ ವಿಚಾರವನ್ನು ಕೇಂದ್ರ ಕಾರ್ಮಿಕ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಸಾವಿನ ಕುರಿತ ದೂರನ್ನು ಕೈಗೆತ್ತಿಕೊಂಡಿದ್ದು, ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದೆ.

ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ದುರಂತ ಸಾವಿನಿಂದ ತೀವ್ರ ದುಃಖವಾಗಿದೆ. ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ನ್ಯಾಯವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಕಾರ್ಮಿಕ ಸಚಿವಾಲಯವು ದೂರನ್ನು ಅಧಿಕೃತವಾಗಿ ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಮಗಳ ಸಾವಿನ ಬಗ್ಗೆ ಕಂಪನಿಗೆ ಮೃತ ಯುವತಿ ತಾಯಿ ಬರೆದಿರುವ ಪತ್ರ ಮನಕಲಕುವಂತಿದೆ.

ತಾಯಿ ಬರೆದ ಪತ್ರದಲ್ಲೇನಿದೆ?
ನನ್ನ ಮಗಳು ಕಂಪನಿಗೆ ಕೆಲಸ ಸೇರಿದ ನಾಲ್ಕು ತಿಂಗಳಲ್ಲೇ ಮೃತಪಟ್ಟಿದ್ದಾಳೆ. ಅವಳಿಗೆ ಕೆಲಸದ ಒತ್ತಡ ಜಾಸ್ತಿ ಇತ್ತು. ನನ್ನ ಹೃದಯ ಭಾರವಾಗಿದೆ. ನಾವು ಅನುಭವಿಸುತ್ತಿರುವ ನೋವನ್ನು ಬೇರೆ ಯಾವುದೇ ಕುಟುಂಬ ಅನುಭವಿಸಬಾರದು.

ಜುಲೈ 6 ರಂದು, ನನ್ನ ಪತಿ ಮತ್ತು ನಾನು, ಸಿಎ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಪುಣೆಗೆ ಬಂದಿದ್ದೆವು. ಆಕೆ ಪಿಜಿಗೆ ತಲುಪಿದಾಗ ಎದೆಯ ಸೆಳೆತದ ಬಗ್ಗೆ ದೂರು ನೀಡಿದ್ದರಿಂದ, ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆವು. ಪುಣೆಯಲ್ಲಿ ಅವಳ ಇಸಿಜಿ ನಾರ್ಮಲ್‌ ಇತ್ತು. ಮಗಳ ದಿನಚರಿ ಬಗ್ಗೆ ಹೃದ್ರೋಗ ತಜ್ಞರು, ‘ನಿಮ್ಮ ಮಗಳು ಸಾಕಷ್ಟು ಸಮಯ ನಿದ್ರೆ ಮಾಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡುತ್ತಿಲ್ಲ’ ಎಂಬ ಆತಂಕಕಾರಿ ವಿಚಾರವನ್ನು ನಮ್ಮ ಮುಂದಿಟ್ಟರು.

ವೈದ್ಯರನ್ನು ನೋಡಿದ ನಂತರವೂ ಕೆಲಸಕ್ಕೆ ಹೋಗಬೇಕೆಂದು ಮಗಳು ಒತ್ತಾಯಿಸಿದ್ದಳು. ಆ ರಾತ್ರಿ ತನಗೆ ರಜೆ ಸಿಗುವುದಿಲ್ಲ ಎಂದಿದ್ದಳು. ಜುಲೈ 7 ರಂದು ಭಾನುವಾರ ತಡವಾಗಿ ತನ್ನ ಪಿಜಿಗೆ ಮರಳಿದ್ದಳು. ಅವಳು ಘಟಿಕೋತ್ಸವದ ದಿನ ಬೆಳಗ್ಗೆ ನಮ್ಮೊಂದಿಗೆ ಇದ್ದಳು. ಆ ದಿನವೂ ಮಧ್ಯಾಹ್ನದ ವರೆಗೆ ಮನೆಯಿಂದ ಕೆಲಸ ಮಾಡುತ್ತಿದ್ದಳು. ಮಗಳು ಸಂಪೂರ್ಣ ದಣಿದ ಸ್ಥಿತಿಯಲ್ಲಿ ಮನೆಗೆ ಹಿಂದಿರುಗುತ್ತಿದ್ದಳು. ಕೆಲವೊಮ್ಮೆ ತನ್ನ ಬಟ್ಟೆಗಳನ್ನು ಬದಲಾಯಿಸದೆ ಹಾಸಿಗೆಯ ಮೇಲೆ ಮಲಗುತ್ತಿದ್ದಳು. ತನ್ನ ಕೆಲಸದ ಗಡುವನ್ನು ಪೂರೈಸಲು ತುಂಬಾ ಪ್ರಯತ್ನಿಸುತ್ತಿದ್ದಳು. ಅವಳು ಛಲಗಾರ್ತಿ. ಯಾವುದೇ ಕೆಲಸವನ್ನು ಸುಲಭಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಹೊಸ ಹೊಸ ವಿಚಾರಗಳನ್ನು ಕಲಿಯಲು ತುಂಬಾ ಆಸಕ್ತಿ ವಹಿಸುತ್ತಿದ್ದಳು. ಆದರೆ ಅತಿಯಾದ ಕೆಲಸದ ಒತ್ತಡ ಅವಳಿಗೆ ಈ ಪರಿಸ್ಥಿತಿ ತಂದಿತು.

ನನ್ನ ಮಗಳ ಅಂತ್ಯಕ್ರಿಯೆ ವೇಳೆ ಕಂಪನಿಯಿಂದ ಯಾರೊಬ್ಬರು ಕೂಡ ಬಂದಿರಲಿಲ್ಲ. ಸಂಸ್ಥೆಗಾಗಿ ದುಡಿದ ಉದ್ಯೋಗಿಯೊಬ್ಬರ ಅಂತ್ಯಕ್ರಿಯೆಗೆ ಬಾರದೇ ಇದ್ದದ್ದು ಮನಸ್ಸಿಗೆ ನೋವು ತಂದಿದೆ ಎಂದು ಅನ್ನಾ ತಾಯಿ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.

- Advertisement - Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!