ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಿಗಣಿ ಸಮೀಪದ ನಂಜಾಪುರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಚಂದ್ರಕಲಾ (19) ಮೃತಪಟ್ಟ ಯುವತಿ. ಚಂದ್ರಕಲಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಪ್ರಿಯಕರನಿಂದಾಗಿ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಚಂದ್ರಕಲಾ ತನ್ನ ನೆರೆಮನೆಯ ಅರುಣ್ ಕುಮಾರ್ ನನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಈ ವಿಷಯ ಮನೆಯವರಿಗೆ ತಿಳಿದಾಗ ಹುಡುಗಿಗೆ ಬೇರೊಬ್ಬ ಹುಡುಗನೊಂದಿಗೆ ನಿಶ್ಚಿತಾರ್ಥ ಮಾಡಿ ಕೊಟ್ಟಿದ್ದರು.
ಅರುಣ್ ಕುಮಾರ್ ನಡೆ ಸರಿಯಿಲ್ಲ. ಮದುವೆ ಬೇಡ ಎಂದು ಪೋಷಕರು ಬಾಲಕಿಗೆ ಮನವರಿಕೆ ಮಾಡಿದ್ದರು. ಇದಕ್ಕೆ ಒಪ್ಪಿದ ಹುಡುಗಿ ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದಾಳೆ ಎಂದು ಆಕೆಯ ಮನೆಯವರು ಹೇಳಿದ್ದಾರೆ.
ಅಲ್ಲದೆ, ಬೇರೆಯವರನ್ನು ಮದುವೆಯಾದರೆ ಕೊಲೆ ಮಾಡುವುದಾಗಿ ಅರುಣ್ ಕುಮಾರ್ ಬೆದರಿಕೆ ಹಾಕಿದ್ದ ಎಂದು ಚಂದ್ರಕಲಾ ಕುಟುಂಬದವರು ಆರೋಪಿಸಿದ್ದಾರೆ. ತನ್ನ ಮಗಳ ಸಾವಿಗೆ ಆತನೇ ಕಾರಣ ಎಂದು ಜಿಗಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಚಂದ್ರಕಲಾ ಆತ್ಮಹತ್ಯೆ ಮಾಡಿಕೊಂಡ ನಂತರ ಅರುಣ್ ಕುಮಾರ್ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿದೆ.