ಹೊಸದಿಗಂತ ವರದಿ ಮಂಗಳೂರು:
ಪ್ರೀತಿಸಿದ ಯುವತಿ ಕೈಕೊಟ್ಟ ಕಾರಣದಿಂದ ನೊಂದ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತೂರು ಗ್ರಾಮದ ತಾರೆಮಾರ್ ಅರ್ಬಿ ಎಂಬಲ್ಲಿ ಭಾನುವಾರ ನಡೆದಿದೆ.
ಚಂದ್ರಹಾಸ(32) ನೇಣಿನ ಕುಣಿಕೆಗೆ ಕೊರಳೋಡ್ಡಿದ ಯುವಕ. ವೃತ್ತಿಯಲ್ಲಿ ಮೇಸ್ತ್ರಿಯಾಗಿದ್ದ ಚಂದ್ರಹಾಸ ತನ್ನದೇ ಊರಿನ ಕ್ರಿಶ್ಚಿಯನ್ ಧರ್ಮದ ಯುವತಿಯೊಬ್ಬಳನ್ನು ಹಲವಾರು ವರ್ಷಗಳಿಂದ ಪ್ರೀತಿಸುತ್ತಿದ್ದ.
ಇತ್ತೀಚೆಗೆ ಯುವತಿ ಈತನಿಂದ ದೂರವಾಗಿದ್ದಳು. ಬಳಿಕ ಚಂದ್ರಹಾಸ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದ್ದು, ಶನಿವಾರ ರಾತ್ರಿ 8 ಗಂಟೆಗೆ ಮನೆಗೆ ಬಂದು, ತನ್ನ ಅಕ್ಕನ ಮಕ್ಕಳಿಗೆ ತಿಂಡಿ ನೀಡಿ ಹೊರ ಹೋಗಿದ್ದ. ಭಾನುವಾರ ಮುಂಜಾನೆ 5:30ಕ್ಕೆ ತನ್ನ ಸ್ನೇಹಿತನಿಗೆ ತಾನಿರುವ ಜಾಗಕ್ಕೆ ಬರುವಂತೆ ಮೊಬೈಲ್ ಮೆಸೇಜ್ ಕಳುಹಿಸಿದ್ದು, ಅದುವರೆಗೂ ಮೊಬೈಲ್ ನಲ್ಲಿ ವಿಡಿಯೋ ಕಾಲ್ ಮಾಡಿ ಸ್ನೇಹಿತರ ಜತೆ ಮಾತನಾಡುತ್ತಿದ್ದ. ಮೆಸೇಜ್ ಬಂದ ತಕ್ಷಣ ಸ್ನೇಹಿತ ಚಂದ್ರಹಾಸ್ ಹೇಳಿದ ಸ್ಥಳಕ್ಕೆ ದೌಡಾಯಿಸಿದ್ದ. ಆದರೆ ಅಷ್ಟರಲ್ಲಿ ಚಂದ್ರಹಾಸ ಮರಕ್ಕೆ ಹಗ್ಗ ಬಿಗಿದು ನೇಣು ಹಾಕಿಕೊಂಡಿದ್ದ. ಈತ ಬರೆದಿಟ್ಟಿದ್ದ ಡೆತ್ ನೋಟ್ ದೊರೆತಿದೆ.
ತಾನು ಪ್ರೀತಿಸಿದ ಯುವತಿಯ ಹೆಸರು ಮತ್ತು ಆಕೆಯ ಮೊಬೈಲ್ ನಂಬರ್ ಸಹಿತ ಆತ್ಮಹತ್ಯೆಗೆ ಕಾರಣವನ್ನು ಡೆತ್ ನೋಟಲ್ಲಿ ಚಂದ್ರಹಾಸ ಬರೆದಿದ್ದಾನೆ ಎಂದು ಆತನ ಆಪ್ತ ಸ್ನೇಹಿತರು ಹೇಳಿದ್ದಾರೆ.
ಬಜಪೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಡೆತ್ ನೋಟ್ ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.