ನಿಮ್ಮ ಜೀವನ ದೇಶದ ಯುವಕರಿಗೆ ಸ್ಫೂರ್ತಿ: ಅಮನ್ ಸೆಹ್ರಾವತ್‌ಗೆ ಕರೆ ಮಾಡಿ ಅಭಿನಂದಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ಪುರುಷರ ಫ್ರೀಸ್ಟೈಲ್ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದಿರುವ ಅಮನ್ ಸೆಹ್ರಾವತ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಅಭಿನಂದಿಸಿದ್ದಾರೆ.

ಕೇರಳದಲ್ಲಿ ವಯನಾಡಿಗೆ ಭೇಟಿ ನೀಡಿದ್ದ ಮೋದಿ ಅಲ್ಲಿಂದಲೇ ಅಮನ್‌ಗೆ ಕರೆ ಮಾಡಿ ಮಾತನಾಡಿದರು. ‘ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಅಮನ್, ನಿಮ್ಮ ಭವಿಷ್ಯ ಇನ್ನಷ್ಟು ಉಜ್ವಲವಾಗಿರಲಿ. ನಿಮ್ಮ ಸಾಧನೆಯಿಂದ ಇದೀಗ ಇಡೀ ದೇಶದ ಮನೆ ಮಾತಾಗಿದ್ದೀರಿ. ಛತ್ರಸಾಲ್ ಕ್ರೀಡಾಂಗಣವನ್ನು ತಮ್ಮ ಮನೆಯನ್ನಾಗಿ ಮಾಡಿಕೊಳ್ಳುವ ಕೆಲವೇ ಕೆಲವು ಆಟಗಾರರಿದ್ದಾರೆ. ಅವರಲ್ಲಿ ನೀವು ಕೂಡ ಒಬ್ಬರು. ಕುಸ್ತಿಗೆ ನಿಮ್ಮನ್ನು ನೀವು ಮುಡಿಪಾಗಿಟ್ಟಿದ್ದೀರಿ. ನಿಮ್ಮ ಜೀವನವು ದೇಶವಾಸಿಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ನಾನು ನಂಬುತ್ತೇನೆ. ಭಾರತಕ್ಕೆ ಒಲಿಂಪಿಕ್ ಪದಕ ಗೆದ್ದ ಅತ್ಯಂತ ಕಿರಿಯ ಆಟಗಾರ ನೀವು. ನಿಮ್ಮ ಮುಂದೆ ಇನ್ನೂ ದೀರ್ಘ ಪ್ರಯಾಣವಿದೆ, ನೀವು ಖಂಡಿತವಾಗಿಯೂ ಈ ದೇಶದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುತ್ತೀರಿ ಎಂಬ ವಿಶ್ವಾಸವಿದೆ ಎಂದಿದ್ದಾರೆ.

ಆ ನಂತರ ಮಾತನಾಡಿದ ಅಮನ್, ಈ ಬಾರಿ ಚಿನ್ನದ ಪದಕವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ 2028 ರಲ್ಲಿ ನಡೆಯಲ್ಲಿರುವ ಲಾಸ್ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ ಖಂಡಿತವಾಗಿ ಚಿನ್ನ ತರುವುದಾಗಿ ಹೇಳಿದರು. ದೇಶವಾಸಿಗಳು ಚಿನ್ನದ ಪದಕವನ್ನು ನಿರೀಕ್ಷಿಸುತ್ತಿದ್ದರು, ಆದರೆ ನಾನು ಅದನ್ನು ಪಡೆಯಲು ಸಾಧ್ಯವಾಗಲಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋದಿ, ‘ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ ಎಂಬುದನ್ನು ಬಿಟ್ಟುಬಿಡಿ. ನೀವು ಈಗಾಗಲೇ ದೇಶಕ್ಕೆ ಸಾಕಷ್ಟು ಕೊಡುಗೆ ನೀಡಿದ್ದೀರಿ. ನಿಮ್ಮ ಜೀವನವು ದೇಶದ ಯುವಕರಿಗೆ ಉತ್ತಮ ಸ್ಫೂರ್ತಿಯಾಗಲಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!