ಯುವ ಕಾಂಕ್ಲೇವ್ 2023 | ಮಾರ್ಕ್ಸವಾದ ಭಾರತದಲ್ಲಿ ಅಸಂಮಜಸ: ಡಾ. ಪ್ರಸನ್ನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿ: ಶಿಕ್ಷಣ ಸಂಸ್ಥೆಗಳಲ್ಲಿ ವಿಚಾರವಾದದ ಚಟುವಟಿಕೆಗಳು ನಡೆಯುಬೇಕು. ಆದರೆ ಆ ವಿಚಾರ ದೇಶ ಹಾಗೂ ಸಮಾಜಕ್ಕೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು ಎಂದು ಫರ್ಗುಸನ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಪ್ರಸನ್ನ ದೇಶಪಾಂಡೆ ಹೇಳಿದರು.

ನಗರದ ಕೆಎಲ್‌ಎಸ್ ಗೋಗ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಯುವ-2023 ಸಮ್ಮೇಳನದ ಗೋಷ್ಠಿಯಲ್ಲಿ ಅರ್ಬನ್ ನಕ್ಸಲಿಸಂ ಕುರಿತು ಅವರು ಮಾತನಾಡಿದರು.

ನಕ್ಸಲಿಸಂ ಎಲ್ಲವೂ ಒಂದೇ. ಅರ್ಬನ್ ಹಾಗೂ ರೂರಲ್ ಎಂಬ ಭಾಗಗಳಿಲ್ಲ. ಜೆಎನ್‌ಯು, ಹೈದರಾಬಾದ್ ಯುನಿವರ್ಸಿಟಿ ಸೇರಿದಂತೆ ದೇಶದ ಬಹುತೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಾಗೂ ಇತ್ತೀಚೆಗೆ ನಡೆದ ರೈತ ಹೋರಾಟ ಎಲ್ಲವೂ ಗುಪ್ತ ಪ್ರಣಾಳಿಕೆಯೊಂದಿಗೆ ನಡೆದಿದೆ. ಬಹಳ ಹಿಂದೆ ಜಮೀನ್ದಾರರ ವಿರುದ್ಧ ರೈತರು ನಡೆಸಿದ ಹೋರಾಟದ ಆಧುನಿಕ ರೂಪವೇ ನಕ್ಸಲಿಸಂ. ಪ್ರಸ್ತುತ ಅದರ ಸ್ವರೂಪ ಹಾಗೂ ಉದ್ದೇಶಗಳು ಬದಲಾಗಿವೆ. ಆರ್‌ಎಸ್‌ಎಸ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿಲ್ಲ ಎಂದು ಎಡಪಂಥೀಯ ರಾಜಕಾರಣಿಗಳು ಅನೇಕ ಬಾರಿ ಆರೋಪಿಸಿದ್ದಾರೆ. ಆದರೆ ಆರ್‌ಎಸ್‌ಎಸ್ ಸ್ಥಾಪಕ ಕೇಶವ ಹೆಡಗೆವಾರ್ ಸ್ವತಃ ಕ್ರಾಂತಿಕಾರಿಯಾಗಿದ್ದರು, ಬ್ರಿಟಿಷರ ವಸಹಾತುಶಾಹಿ ನೀತಿ ವಿರೋಧಿಸಿದ್ದರು.

ಕಾರ್ಲ್ ಮಾರ್ಕ್ಸ ಆಲೋಚನೆಗಳು ಯುರೋಪ್‌ಗೆ ಮಾತ್ರ ಸೀಮಿತವಾಗಿದ್ದವು ಆದರೆ ಅವುಗಳನ್ನೇ ಭಾರತದಲ್ಲಿ ಅನ್ವಯಿಸಿದ್ದು ಅಸಮಂಜಸವಾಗಿದೆ. ಈ ಸಿದ್ಧಾಂತ ಹೇರಿಕೆಯಿಂದ ಭಾರತದ ಆರ್ಥಿಕ-ಸಾಮಾಜಿಕ ವ್ಯವಸ್ಥೆ ನಲುಗಿತು. ಕ್ರಮೇಣ ಮಾರ್ಕಿಸಂ ಸಾಂಸ್ಕೃತಿಕ ಕ್ಷೇತ್ರಕ್ಕೂ ಲಗ್ಗೆ ಇಟ್ಟಿತು. ಕಲೆ, ಸಾಹಿತ್ಯ, ಸಿನೆಮಾಗಳ ಮೂಲಕ ನಕ್ಸಲಿಸಂ ಸಿದ್ಧಾಂತದ ಪ್ರಸರಣವಾಗುತ್ತಿದೆ. ಸಾಂಸ್ಕೃತಿಕ ಅಧ್ಯಯನ ಸಂಸ್ಥೆ ಹೆಸರಿನಲ್ಲಿ ಭಾರತದ ಬಗ್ಗೆ ಮಿಥ್ಯಗಳನ್ನು ಪಸರಿಸಲಾಯಿತು. ಕಿಸ್ ಆಫ್ ಲವ್ ಅಭಿಯಾನ ಇಂಥಃ ಉದಾಹರಣೆಗಳಲ್ಲೊಂದು. ಅಲ್ಪಸಂಖ್ಯಾತರು, ಮಹಿಳೆ, ಯುವಪೀಳಿಗೆ, ಹಿಂದುಳಿದ ವರ್ಗವನ್ನು ಅರ್ಬನ್ ನಕ್ಸಲಿಸಂ ಗುರಿಯಾಗಿಸಿಕೊಂಡಿದೆ. ಅನೇಕ ಜನ ಮಿಥ್ಯದ ಸಿದ್ಧಾಂತಕ್ಕೆ ತುತ್ತಾಗಿದ್ದಾರೆ ಇದಕ್ಕೆ ಪರಿಹಾರವಾಗಿ ನಾವು ಪ್ರಜ್ಞಾವಂತರಾಗಿ ನಮ್ಮ ಕಾರ್ಯಗಳನ್ನು ಸಮರ್ಥಿಸಿಕೊಳ್ಳುವಂತಾಗಬೇಕು.

ಸಾಮಾಜಿಕ ಮಾಧ್ಯಮಗಳ ಮೇಲೆ ಸಾಂಸ್ಕೃತಿಕ ಆಕ್ರಮಣ ವಿಷಯ ಕುರಿತು ಟೈಮ್ಸ್ ಗ್ರುಪ್‌ನ ಚೀಫ್ ಮ್ಯಾನೇಜರ್ ಪ್ರಿಯಾಂಕ ಡಿಯೊ ಮಾತನಾಡಿ, ಸಿದ್ಧಾಂತದ ಹೇರಿಕೆಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತಪ್ಪು ಮಾಹಿತಿಗಳನ್ನು ಈಗಲೂ ಪ್ರಸಾರಿಸಲಾಗುತ್ತಿದೆ. ಅನೇಕ ರಾಜಕಾರಣಿಗಳು ಸಾಮಾಜಿಕ ಮಾಧ್ಯಮಗಳನ್ನು ಇದೇ ಕಾರಣಕ್ಕೆ ಬಳಸುತ್ತಿದ್ದಾರೆ. ಇಂತಃ ಸಾಂಸ್ಕೃತಿಕ ಆಕ್ರಮಣ ದೇಶಕ್ಕೆ ಮಾರಕವಾಗಿವೆ. ಇದನ್ನು ತಡೆಯಲು ವೈಯಕ್ತಿಕವಾಗಿ ಕಾರ್ಯ ಆರಂಭಿಸುವುದ ಅವಶ್ಯಕ. ಇದು ಮಂದಗತಿಯಾದರೂ ತೊಂದರೆಯಿಲ್ಲ ಆದರೆ ಕೊನೆಗೆ ನಿರೀಕ್ಷಿತ ಫಲ ಖಂಡಿತ ದೊರೆಯುತ್ತದೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!