ಹೊಸದಿಗಂತ ವರದಿ,ಹಾಸನ:
ರಸ್ತೆ ಅಗಲಿಕರಣ ಕಾಮಗಾರಿ ನಡೆಯುತ್ತಿರುವ ರಸ್ತೆಯಲ್ಲಿ ಬೈಕ್ ಸವಾರನೋರ್ವ ರಾತ್ರಿವೇಳೆ ರಸ್ತೆ ಎಂದು ತಿಳಿದು ಸಿಮೆಂಟ್ ಪೈಪ್ ಅಳವಡಿಸಿರುವ ಗುಂಡಿಗೆ ಬಿದ್ದು ಸಾವನಪ್ಪಿರುವ ಘಟನೆ ನಗರದ ಹೊರವಲಯ ಬಿಟ್ಟಗೌಡನಹಳ್ಳಿ ವೃತ್ತದ ಬೆಂಗಳೂರು ರಿಂಗ್ ರಸ್ತೆಯ ರಿಲೆಯನ್ಸ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಕೊಕ್ಕನಘಟದ ನಿವಾಸಿ ಚಾಲಕ ಕೆಲಸ ನಿರ್ವಹಿಸುವ ಯುವಕ ೨೦ ವರ್ಷದ ಕಾರ್ತಿಕ್ ಎಂಬುವನು ಕೆಲಸ ಮುಗಿಸಿಕೊಂಡು ವಾಪಸ್ ಹೋಗುವ ವೇಳೆ ಕತ್ತಲೆಯಲ್ಲಿ ರಸ್ತೆ ಎಂದು ತಿಳಿದು ತೋಡಲಾಗಿದ್ದ ಗುಂಡಿಗೆ ಬಿದ್ದು ತನ್ನ ಜೀವವನ್ನೆ ಬಿಟ್ಟಿದ್ದಾನೆ. ಸಾರ್ವಜನಿಕರು ಗುತ್ತಿಗೆದಾರ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ಧ ಆಕ್ರೋಶವ್ಯಕ್ತಪಡಿಸಿದಲ್ಲದೇ ದಿಡೀರ್ ಬೈಪಾಸ್ ರಸ್ತೆ ಮಧ್ಯೆ ಪ್ರತಿಭಟಿಸಿದರು. ನಗರದ ಸಮೀಪ ಬೈಪಾಸ್ ರಸ್ತೆಯಲ್ಲಿ ರಸ್ತೆ ಅಗಲಿಕರಣದ ಕಾಮಗಾರಿ ನಡೆಸಲಾಗುತ್ತಿದ್ದು, ಅಲ್ಲಲ್ಲಿ ಗುಂಡಿ ತೆಗೆದು ಪೈಪ್ ಲೈನ್ ಅಳವಡಿಸಲಾಗುತ್ತಿದೆ. ಆದರೆ ಕಾಮಗಾರಿ ಮಾಡುವಾಗ ಗುಂಡಿ ಸುತ್ತ ತಡೆ ಗೋಡೆ ನಿರ್ಮಿಸಿ ಕೆಲಸ ನಿರ್ವಹಿಸಬೇಕು. ಆದರೇ ಅದು ಯಾವುದನ್ನು ಮಾಡದೇ ಕಾನೂನನ್ನು ಗಾಳಿಗೆ ತೂರಿ ತಮಗೆ ಇಷ್ಟ ಬಂದಂತೆ ಅವೈಜ್ಱಾನಿಕ ರಸ್ತೆ ಕಾಮಗಾರಿ ಮಾಡಲಾಗುತ್ತಿದೆ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದರು.
ಆರ್.ಪಿ.ಐ. ಪಕ್ಷದ ರಾಜ್ಯಾಧ್ಯಕ್ಷರಾದ ಸತೀಶ್ ಮಾಧ್ಯಮದೊಂದಿಗೆ ಮಾತನಾಡಿ, ಬೆಂಗಳೂರು ಮತ್ತು ಮಂಗಳೂರು ಸಂಪರ್ಕದ ನ್ಯಾಷನಲ್ ಹೈವೆ ರಸ್ತೆಯಲ್ಲಿ ರಸ್ತೆ ವಿಸ್ತರಣೆ ಕಾಮಗಾರಿ ಕಳೆದ ೬ ತಿಂಗಳು ಹಾಗೂ ಒಂದು ವರ್ಷಗಳಿಂದಲೂ ನಡೆಯುತ್ತಿದ್ದು, ಯಾವುದೇ ಕಾಮಗಾರಿ ನಡೆಯಬೇಕಾದರೇ ಮುಂಜಾಗೃತೆಯಿAದ ನಿರ್ವಹಿಸಬೇಕು. ರಸ್ತೆ ಅಗಲಿಕರಣ ಮಾಡುವಾಗ ಬ್ಯಾರಿಕೇಡ್ ಹಾಕಿ ನಿರ್ವಹಿಸಬೇಕು. ಕಾಮಗಾರಿ ನಡೆಸುವ ಗುತ್ತಿಗೆದಾರರು ಹಾಗೂ ಟ್ರಾಫೀಕ್ ಪೊಲೀಸ್ ಹಾಗೂ ಜಿಲ್ಲಾಡಳಿತದ ನಿರ್ಲಕ್ಷತೆಯಿಂದ ೨೦ ವರ್ಷದ ಒಬ್ಬ ದಲಿತ ಯುವಕನು ಬೈಕ್ ಸಮೇತ ಈ ಗುಂಡಿಗೆ ಬಿದ್ದು ಸಾವನಪ್ಪಿದ್ದಾನೆ ಎಂದರು. ಮೃತಗೊಂಡ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಬೇಕು. ಜೊತೆಗೆ ಗುತ್ತಿಗೆದಾರರ ಮೇಲೆ ದೂರು ದಾಖಲಿಸಿ ಕಾನೂನು ರೀತಿಯ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಒಕ್ಕಲಿಗರ ಸಂಘದ ಅಧ್ಯಕ್ಷ ಸತೀಶ್ ಗೌಡ ಮಾತನಾಡಿ, ರಸ್ತೆ ಅಗಲಿಕರಣ ಮಾಡುವುದಾಗಿ ಹೇಳಿ ಕಳೆದ ಒಂದುವರೆ ವರ್ಷಗಳಿಂದಲೂ ಬೇಜವಬ್ಧಾರಿಯಲ್ಲಿ ಕಾಮಗಾರಿ ಮಾಡಿ ಕೆಲಸ ತಡವಾಗಿ ಇದೆ ರೀತಿ ಅನೇಕರ ಪ್ರಾಣ ಹೋಗಿದೆ. ಕೊಕ್ಕನಘಟ್ಟ ಗ್ರಾಮದ ಕಾರ್ತಿಕ್ ೨೦ ವರ್ಷದ ಯುವಕ ಅಫೆ ವಾಹನದ ಚಾಲಕನಾಗಿದ್ದು, ಹಣ ಪಡೆದುಕೊಂಡು ವಾಪಸ್ ಹೋಗುವಾಗ ರಸ್ತೆ ಎಂದು ತಿಳಿದು ಪೈಪ್ ಲೈನ್ ಇರುವ ಬೃಹತ್ ಗುಂಡಿ ಒಳಗೆ ಬಿದ್ದು ರಕ್ತ ಹೋಗಿ ಮೃತಪಟ್ಟಿದ್ದಾರೆ. ಮುಂದೆ ಈ ರೀತಿ ಘಟನೆ ಮರುಕಳಿಸಬಾರದು. ಗುತ್ತಿಗೆದಾರರ ಕರೆಯಿಸಿ ಯುವಕನ ಕುಟುಂಬಕ್ಕೆ ಪರಿಹಾರ ಕೊಡಬೇಕು. ಇಲ್ಲವಾದರೇ ಎಲ್ಲಾ ಸಂಘದವರು ಸೇರಿ ಉಗ್ರವಾದ ಹೋರಾಟ ಮಾಡುವುದಾಗಿ ಹೇಳಿದರು.