ಹೊಸದಿಗಂತ ವರದಿ,ಅಂಕೋಲಾ:
ಜಿಲ್ಲೆಯ ಪ್ರವಾಸಿ ತಾಣಗಳ ಸಮುದ್ರ ತೀರಗಳಲ್ಲಿ ನೀರಿಗಿಳಿದು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದ್ದು ಶನಿವಾರ ಗೋಕರ್ಣ ಮತ್ತು ಮುರ್ಡೇಶ್ವರ ಕಡಲ ತೀರಗಳಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋಗುತ್ತಿರುವ ಪ್ರವಾಸಿಗರನ್ನು ಜೀವ ರಕ್ಷಕ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ಪುಣ್ಯಕ್ಷೇತ್ರ ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಸ್ಥಾನಕ್ಕೆ ಇಳಿದ ಸಂದರ್ಭದಲ್ಲಿ ಬೃಹತ್ ಅಲೆಯ ಹೊಡೆತಕ್ಕೆ ಸಿಲುಕಿ ಪ್ರಾಣಾಪಾಯದ ಸ್ಥಿತಿಯಲ್ಲಿದ್ದ ಮೂವರನ್ನು ಜೀವರಕ್ಷಕ ಸಿಬ್ಬಂದಿಗಳು ಅಪಾಯದಿಂದ ಪಾರು ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮಾರುತಿ(20)
ಚಂದನಾ (16) ಮತ್ತು ಮಧುಸೂಧನ (11) ಎನ್ನುವವರು ಅಲೆಗಳ ಹೊಡೆತಕ್ಕೆ ಸಿಲುಕಿ ಅಪಾಯದ ಸ್ಥಿತಿಯಲ್ಲಿ ಇದ್ದಾಗ ಲೈಫ್ ಗಾರ್ಡ್ ಸಿಬ್ಬಂದಿಗಳು, ಕಡಲ ತೀರದ ಮೇಲ್ವಿಚಾರಕರು,ಪ್ರವಾಸಿ ಮಿತ್ರ ಮತ್ತು ಬೋಟಿಂಗ್ ಸಿಬ್ಬಂದಿಗಳು ತಕ್ಷಣ ಕಾರ್ಯಪೃವೃತ್ತರಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.
ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಪ್ರವಾಸಿತಾಣ ಮುರ್ಡೇಶ್ವರದಲ್ಲಿ ಸಮುದ್ರದಲ್ಲಿ ಈಜಲು ಇಳಿದು ಅಪಾಯಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ.
ಕೋಲಾರದಿಂದ ಪ್ರವಾಸಕ್ಕೆ ಬಂದ ಏಳು ಜನರ ತಂಡದಲ್ಲಿದ್ದ ರವೀಂದ್ರ(19) ಎಂಬಾತ ಸಮುದ್ರದ ನೀರಿಗಿಳಿದು ಅಪಾಯಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಜೀವ ರಕ್ಷಕ ಸಿಬ್ಬಂದಿಗಳು ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.