ಯುವ ಕಾಂಕ್ಲೇವ್ 2023: “ಜೀವಿಸಲು ಹೋರಾಡುತ್ತ ಇತರರನ್ನು ಸೋಲಿಸುವುದು ಭಾರತದ ಚಿಂತನೆ ಅಲ್ಲ”

ಹೊಸದಿಗಂತ ವರದಿ ಬೆಳಗಾವಿ: 

ಕುಟುಂಬ ಸಹಬಾಳ್ವೆಯ ತತ್ವ ದರ್ಶನ ಇಡೀ ಜಗತ್ತಿಗೆ ತಲುಪಿಸುವುದೇ ನಮ್ಮ ಕಾಯಕ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ಜೆ. ನಂದಕುಮಾರ ಹೇಳಿದರು. ಬೆಳಗಾವಿ ನಗರದ ಕೆಎಲ್‌ಎಸ್ ಗೋಗ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಸಭಾಂಗಣದಲ್ಲಿ ನಡೆದ ಯುವ-2023 ಸಮ್ಮೇಳನದಲ್ಲಿ ಅವರು ಮಾತನಾಡಿದರು.

ಭಾರತದ ನಾಗರಿಕತೆ ಈಗಲೂ ಮುಂದುವರೆಯುತ್ತಿದೆ ಮತ್ತು ಬೆಳವಣಿಗೆ ಹೊಂದುತ್ತಿದೆ. ವಸುಧೈವ ಕುಟುಂಬಕಮ್ ಪರಿಕಲ್ಪನೆ ನಮ್ಮ ದೇಶದ ಧ್ಯೇಯ ಹಾಗೂ ಗುರಿ. ನಾವು ಯಾರನ್ನೂ ಶತ್ರುಗಳು ಅಥವಾ ಹೊರಗಿನವರು ಎಂದು ಭಾವಿಸಿಲ್ಲ. ಇಡೀ ಪ್ರಪಂಚವನ್ನೇ ಕುಟುಂಬವೆಂದು ಪರಿಗಣಿಸಿದ್ದೇವೆ. ಇದು ಭಾರತದ ಆಧ್ಯಾತ್ಮಿಕ ದೃಷ್ಟಿಕೋನ. ಜೀವಿಸಲು ಹೋರಾಡು, ಇತರರನ್ನು ಸೋಲಿಸು, ಅದಕ್ಕಾಗಿ ಅಧಿಕಾರ ಗಳಿಸು ಇವು ನಮ್ಮ ಸಿದ್ಧಾಂತವಲ್ಲ. ಆದರೆ ರಾಜಕೀಯ ಸಿದ್ಧಾಂತದಲ್ಲಿ ಇದನ್ನೇ ಬಿಂಬಿಸಲಾಗಿದೆ.

ಪಾಶ್ಚಾತ್ಯ ಪರದೆ ನಮ್ಮ ಭಾರತೀಯ ಸತ್ಯಗಳನ್ನು ಮರೆಮಾಡಿದೆ. ಸಂಸ್ಕೃತ ಭಾಷೆಯಿಲ್ಲದಿದ್ದರೆ ಭಾರತೀಯ ಭಾಷೆ ಹಾಗೂ ಇತರ ವೈಜ್ಞಾನಿಕ ವಿಷಯಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಧರ್ಮ ಎಂದರೆ ಒಬ್ಬರು ಎಲ್ಲರಿಗಾಗಿ, ಎಲ್ಲರೂ ಒಬ್ಬನಿಗಾಗಿ. ಈ ಧಾರ್ಮಿಕ ದೃಷ್ಟಿಕೋನ ನಮ್ಮ ಪೂರ್ವಜರ ಆಧ್ಯಾತ್ಮಿಕ ಸಾಧನೆಗಳಿಂದ ತಿಳಿದು ಬಂದಿದೆ. ಮಹೋಪನಿಷದ್‌ನಲ್ಲಿ ವಸುಧೈವ ಕುಟುಂಬಕಮ್ ವಾಕ್ಯದ ಉಲ್ಲೇಖವಿದೆ. ಪಂಚತಂತ್ರದಲ್ಲೂ ಈ ಉಕ್ತಿಯನ್ನು ಕಾಣಬಹುದು.

ನಾವು ಒಂದು ಎನ್ನುವ ಭಾವ, ಎಲ್ಲರನ್ನೂ ಪ್ರೀತಿಸುವುದು, ಪರಸ್ಪರ ಗೌರವ-ಸಹಿಷ್ಣುತೆ, ಅಹಿಂಸೆಯಲ್ಲಿ ನಂಬಿಕೆ, ಎಲ್ಲರನ್ನು ಒಪ್ಪಿಕೊಳ್ಳುವುದು ಈ ಐದು ತತ್ವಗಳು ವಸುದೈವ ಕುಟುಂಬಕಮ್ ಎಂಬ ಎರಡು ಶಬ್ದಗಳಲ್ಲಿ ಅಡಕವಾಗಿವೆ. ಮಹರ್ಷಿ ಅರವಿಂದರ ಕನಸಿನಂತೆ ಭಾರತ ಸ್ವತಂತ್ರ,, ಅಖಂಡ ಹಾಗೂ ಶಕ್ತಿಶಾಲಿಯಾಗಬೇಕು. ಆಧ್ಯಾತ್ಮಿಕ ದರ್ಶನದಿಂದ ಭಾರತದ ಏಳಿಗೆಯಾಗಬೇಕು. ಭಾರತ ಒಂದೇ ಇಡೀ ಜಗತ್ತಿನ ಅಂಧಕಾರವನ್ನು ತೊಲಗಿಸಬಹುದು. ಅದಕ್ಕೆ ಪೂರಕ ವಾತಾವರಣ ನಿರ್ಮಾಣವಾಗುತ್ತಿದೆ. ಪ್ರಸ್ತುತ ಜಿ-20 ಅಧ್ಯಕ್ಷತೆವಹಿಸುರುವುದೇ ಇದಕ್ಕೆ ಉತ್ತಮ ಉದಾಹರಣೆ ಎಂದು ಹೇಳಿದರು.

ಗೋಗ್ಟೆ ಸಂಸ್ಥೆಯ ಚೇರಮನ್ ರಾಜೇಂದ್ರ ಬೆಳಗಾವಕರ್ ಮಾತನಾಡಿ, ಭಾರತದ ಏಳಿಗೆಗೆ ಯುವಪೀಳಿಗೆ ಹೊಸ ಆಲೋಚನೆಗಳನ್ನು ಹೊಂದಬೇಕು. ಅದಕ್ಕಾಗಿ ಈ ಯುವ-2023 ಸಮ್ಮೇಳನ ಪೂರಕವಾಗಲಿದೆ ಎಂದರು. ಪ್ರಬುದ್ಧ ಭಾರತದ ಸಂಯೋಜಕ ಹರ್ಷದ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!