ದಿಗಂತ ವರದಿ ವಿಜಯಪುರ:
ಸಚಿವ ಜಮೀರ್ ಅಹ್ಮದ ಖಾನ್ ಪ್ರಚೋದನಕಾರಿ ಹೇಳಿಕೆ ನೀಡಿ, ವಕ್ಫ್ ಎಂದು ನಮೂದಿಸಲು ಹೇಳಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ವರ್ಷ ಅನಾವೃಷ್ಟಿ ಇತ್ತು ಈಗ ಅತೀವೃಷ್ಟಿ ಆಗಿದೆ. ಇದಕ್ಕೆ ಸರ್ಕಾರ ಸ್ಪಂದಿಸುತ್ತಿಲ್ಲ, ಈ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಅವರ ನೇತೃತ್ವದಲ್ಲಿ ಹಲವು ಕಡೆ ಭೇಟಿ ನೀಡುತ್ತಿದ್ದೇವೆ. ಅಲ್ಲಿ ಬಂದು ರೈತರ ಸಮಸ್ಯೆ ಆಲಿಸುತ್ತಿದ್ದೇವೆ. ಆದರೆ ಇಲ್ಲಿ ಬಂದು ನೋಡಿದರೆ ಇಲ್ಲಿಯ ಸಮಸ್ಯೆಯೇ ಬೇರೆಯಾಗಿದೆ ಎಂದರು.
ರೈತರ ಜಮೀನಿನಲ್ಲಿ ವಕ್ಫ್ ಎಂದು ನೇಮಕ ಮಾಡಿದ್ದಾರೆ. ಈಗ ಸರ್ಕಾರ ಆಡಳಿತ ಮಾಡುತ್ತಿಲ್ಲ, ಮಸೀದಿಗಳು ಆಡಳಿತ ಈ ಸರ್ಕಾರದಲ್ಲಿ ಮಾಡುತ್ತಿದೆ ಎಂದರು.
ವೀರಕ್ತ ಮಠ ನಮ್ಮದೆನ್ನುತ್ತಾರೆ, ಬೀರ ದೇವರ ಗುಡಿ ಕೂಡ ನಮ್ಮದೆನ್ನುತ್ತಾರೆ. ಕಾಂಗ್ರೆಸ್ ಹಚ್ಚಿದ ಬೆಂಕಿಯನ್ನು ನಾವೆಲ್ಲರೂ ಸೇರಿ ಆರಿಸಬೇಕಿದೆ. ಚುನಾವಣೆಗೆ ಮುಂಚೆಯೇ ಪ್ರಧಾನಿಗಳು ಈ ಮಾತನ್ನು ಹೇಳಿದ್ದರು. ಕಾಂಗ್ರೆಸ್ ಗೆ ಮತ ಹಾಕಿದರೆ ಏನಾಗತ್ತೆ ಎಂದು ಮೊದಲೇ ಹೇಳಿದ್ದರು ಎಂದರು.
ಜಮೀರ್ ಅಹ್ಮದ ಅವರು ಮಾತನಾಡಿದ್ದನ್ನು ಕೇಳಿದರೆ ರಕ್ತ ಕುದಿಯತ್ತೆ. ಹಲ್ಲು ಕಚ್ಚಿ ಅವರು ಮಾತನಾಡುತ್ತಾರೆ. ಕಾಂಗ್ರೆಸ್ ಮೊದಲ ಪ್ರಧಾನಿಯಾಗಿದ್ದ ನೆಹರು ಅವರ ಕೊಡುಗೆ ಈ ವಕ್ಫ್ ಎಂದರು.
ದೇಶವನ್ನು ಸದೃಢವಾಗಿ ಕಟ್ಟುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ರಾಜ್ಯದ ವಿವಿಧ ಭಾಗದಲ್ಲಿ ವಕ್ಫ್ ವಿಚಾರವಾಗಿ ಸಮಸ್ಯೆ ಶುರುವಾಗಿದೆ. ಈ ಸರ್ಕಾರ ಜನರ ಕಣ್ಣೀರು ಹಾಕಿಸುವ ಕೆಲಸ ಮಾಡುತ್ತಿದೆ. ವಕ್ಫ್ ಬೊರ್ಡ ಇರುವುದು ಖಬರಸ್ತಾನ, ಮಸೀದಿಜಾಗ ಕಾಪಾಡಿಕೊಳ್ಳಲು. ಇದು ಹಿಂದೂಗಳ ಮೇಲೆ ಆಗುತ್ತಿರುವ ಪ್ರಹಾರ ಎಂದರು.
ಹಿಂದುತ್ವಕ್ಕೆ ಚಡಿ ಏಟು ಕೊಡಲು ಇವರು ಪ್ರಾರಂಭ ಮಾಡಿದ್ದಾರೆ. ನಮ್ಮ ದೇವರುಗಳ ಕೈಯಲ್ಲಿ ಸಹಿತ ಆಯುಧಗಳಿವೆ. ಪರಿಸ್ಥಿತಿ ಮೀರಿದರೆ ನಮ್ಮ ದೇವರುಗಳು ಯಾವುದರಲ್ಲಿ ಪ್ರಹಾರ ಮಾಡತಾರೆ ಗೊತ್ತಾಗಲ್ಲ ಎಂದರು.
ಕಾಂಗ್ರೆಸ್ ಒಂದು ಖಬರಸ್ತಾನ್ ಪಾರ್ಟಿ. ಸಮಸ್ಯೆ ಹುಟ್ಟು ಹಾಕಿ ಓಟ್ ಬ್ಯಾಂಕ್ ಕ್ರಿಯೇಟ್ ಮಾಡುವ ಸರ್ಕಾರ ಕಾಂಗ್ರೆಸ್. ಯಾವುದೇ ಕಾರಣಕ್ಕೂ ಒಂದಿಂಚೂ ಜಾಗ ನಾವು ಬಿಟ್ಟು ಕೊಡಲ್ಲ. ವಕ್ಫ್ ಬೊರ್ಡ ಅನ್ನು ತಕ್ಷಣದಿಂದ ಕಿತ್ತು ಬೀಸಾಕಬೇಕು. ಕೇಂದ್ರ ಸರ್ಕಾರಕ್ಕೆ ನಾನು ಇದನ್ನು ಆಗ್ರಹ ಪಡಿಸುವೆ ಎಂದರು.
1974 ಗೆಜೆಟ್ ಆಧರಿಸಿ ನೊಟೀಸ್ ಕೊಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ನೊಟೀಸ್ ವಾಪಸ್ ಪಡೆಯಲಾಗಿದೆ ಎಂದು ಸಿಎಂ ಹೇಳುತ್ತಾರೆ. ಸಿಎಂ ಅಡ್ವೋಕೇಟ್ ಆಗಿದ್ದವರು, ಇವರೇನಾದರೂ ಸಂಡೇ ಲಾಯರ್ ಆ ?, ನೋಟಿಸ್ ವಾಪಸ್ ಪಡೆದರು ಗೆಜೆಟ್ ನಲ್ಲಿ ಅದು ಇರತ್ತೆ ಅದು ವಾಪಸ್ ಪಡೆದರು ಆಗಲ್ಲ. ಗೆಜೆಟ್ ವಾಪಸ್ ಪಡೆಯಬೇಕು ಎಂದರು.
ಒಳ ಮೀಸಲಾತಿ ಜಾರಿ ವಿಚಾರ ಬಗ್ಗೆ, ಒಳ ಮೀಸಲಾತಿ ಜಾರಿಗೆ ತರದೇ ನುಣುಚಿಕೊಳ್ಳುತ್ತಿದ್ದೀರಾ ?, ತಕ್ಷಣ ಮೀನಾಮೇಷ ಎಣಿಸದೇ ಒಳಮೀಸಲಾತಿ ಜಾರಿಗೆ ತರಬೇಕು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ ಕೂಚಬಾಳ, ಮುಖಂಡರಾದ ವಿಜುಗೌಡ ಪಾಟೀಲ, ರಮೇಶ ಭೂಸನೂರ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.