ಹೊಸದಿಗಂತ ಹುಬ್ಬಳ್ಳಿ:
ರಾಜ್ಯವನ್ನು ಇಸ್ಲಾಮೀಕರಣ ಮಾಡಲು ಹೊರಟಿರುವ ಹಾಗೂ ಕೋಮು ದ್ವೇಷ ಸೃಷ್ಟಿಸುತ್ತಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒತ್ತಾಯಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಹೆಚ್ಚು ಆದಾಯವಿರುವ ಹಾಗೂ ಎಲ್ಲ ಪ್ರಮುಖ ದೇವಸ್ಥಾನಗಳ ಮೇಲೆ ಹಿಡಿತ ಸಾಧಿಸುತ್ತಿದೆ. ಮುಸ್ಲಿಮರ್ ತುಷ್ಟೀಕರಣ ಹಾಗೂ ಡೋಂಗಿ ಜಾತ್ಯತೀತತೆ ನೀತಿಯಿಂದಾಗಿ ದೇವಸ್ಥಾನಗಳ ಒಂದು ಇಂಚು ಜಾಗವೂ ಹೆಚ್ಚಾಗಿಲ್ಲ ಎಂದು ಆರೋಪಿಸಿದರು.
ರೈತರಿಗೆ ನೀಡಿದ್ದ ನೋಟಿಸ್ ಹಿಂಪಡೆಯಲಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ, ರೈತರ ಪಹಣಿಯಲ್ಲಿ ಈಗಲೂ ವಕ್ಫ್ ಆಸ್ತಿ ಎಂದು ನಮೂದಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ರೈತರು ಜಮೀನು ಹೊಂದಿದ್ದಾರೆ. ಇತ್ತೀಚಿನ ವರ್ಷಗಳ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ಕೂಡಲೇ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ನವರು ಬಿಜೆಪಿ ಸರ್ಕಾರ ಇದ್ದಾಗಲೂ ರೈತರಿಗೆ ನೋಟಿಸ್ ನೀಡಲಾಗಿತ್ತು ಎಂದು ಹೇಳುತ್ತಿದ್ದಾರೆ. ಆಗ ನೋಟಿಸ್ ನೀಡಿದ್ದರೂ ಅದು ತಪ್ಪು. ಯಾರೂ ನಮ್ಮ ಗಮನಕ್ಕೆ ತಂದಿರಲಿಲ್ಲ. ನಮ್ಮ ಸರ್ಕಾರ ಇದ್ದುದರಿಂದ ವಕ್ಫ್ ಮಂಡಳಿಯವರು ಗೋಪ್ಯವಾಗಿ ನೋಟಿಸ್ ನೀಡಿದ್ದರು. ಆಗ ನಮ್ಮ ಗಮನಕ್ಕೆ ಬಂದಿದ್ದರೆ ಮಂಡಳಿಯವರಿಗೆ ಎಚ್ಚರಿಕೆ ನೀಡಿ, ನೋಟಿಸ್ ಹಿಂಪಡೆಯಲು ಹೇಳುತ್ತಿದ್ದೆವು. ಈಗ ರೈತರು ನಮ್ಮ ಗಮನಕ್ಕೆ ತಂದಿದ್ದರಿಂದ ಹೋರಾಟ ಮಾಡಲಾಗುತ್ತಿದೆ ಎಂದರು.
ಪ್ರತಿ ಜಿಲ್ಲೆಗಳಿಗೆ ಹೋಗಿ ವಕ್ಫ್ ಮಂಡಳಿಯವರು ವಕ್ಫ್ ಅದಾಲತ್ ಅನ್ನು ನಡೆಸುತ್ತಿದ್ದು ಕೂಡಲೇ ಅದನ್ನು ನಿಲ್ಲಿಸಬೇಕು. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.