ವಿಧಾನ ಪರಿಷತ್‌ನ ತೆರವಾದ ಸ್ಥಾನಕ್ಕೆ ಕೊಡಗಿಗೆ ಪ್ರಾತಿನಿಧ್ಯ ನೀಡಿ: ಜಿಲ್ಲಾ ಕಾಂಗ್ರೆಸ್ ಒತ್ತಾಯ

ಹೊಸದಿಗಂತ ವರದಿ ಮಡಿಕೇರಿ:

ರಾಜ್ಯ ವಿಧಾನ ಪರಿಷತ್‍ನ ತೆರವಾಗಿರುವ ಮೂರು ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯುವ ಸಂದರ್ಭ ಕೊಡಗಿಗೆ ಒಂದು ಸ್ಥಾನವನ್ನಾದರೂ ನೀಡಬೇಕೆಂದು ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿರುವ ಕೊಡಗು ಜಿಲ್ಲೆಗೆ ಜೂ.30ರಂದು ನಡೆಯಲಿರುವ ಎಂ.ಎಲ್.ಸಿ. ಚುನಾವಣೆಯಲ್ಲಿ ಒಂದು ಸ್ಥಾನವನ್ನಾದರೂ ನೀಡಬೇಕು ಎಂದು ಆಗ್ರಹಿಸಿದರು.

ಅಲ್ಲದೆ ಈ ಕುರಿತು ಕೊಡಗು ಜಿಲ್ಲಾ ಕಾಂಗ್ರೆಸ್‍ನಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮುಖ್ಯ ಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ತಿಳಿಸಿದರು.

ಮರೆಮಾಚಲು ಪ್ರತಿಭಟನೆ

ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದಲ್ಲಿದ್ದಾಗ ಪೆಟ್ರೋಲ್, ಡೀಸೆಲ್, ಅಕ್ಕಿ, ಎಣ್ಣೆ, ಗ್ಯಾಸ್ ಸೇರಿದಂತೆ ಅಗತ್ಯ ವಸ್ತುಗಳಿಗೆ ಬೆಲೆ ಏರಿಕೆಯಾದಾಗ ಸಮರ್ಥಿಸಿಕೊಂಡಿದ್ದವರು, ಈಗ ಬೀದಿಗೆ ಬಂದು ನಿಂತಿರುವುದು ಎಷ್ಟು ಸರಿ. ಬೆಲೆ ಏರಿಕೆ ಬಗ್ಗೆ ಪ್ರಶ್ನೆ ಮಾಡುವ ನೈತಿಕತೆಯನ್ನು ಬಿಜೆಪಿ ಕಳೆದುಕೊಂಡಿದ್ದು, ಜನ ಬಿಜೆಪಿಯನ್ನು ಜಿಲ್ಲೆ ಹಾಗೂ ರಾಜ್ಯದಲ್ಲಿ ಬೀದಿಗೆ ತಂದಿದ್ದಾರೆ. ಇದನ್ನು ಮರೆಮಾಚಲು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಟೀಕಿಸಿದರು.

ಬಿಟ್ಟಿ ಭಾಗ್ಯವಲ್ಲ-ಅಗತ್ಯ ಸೇವೆ

ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳ ಗ್ಯಾರಂಟಿ ಕಾರ್ಡ್ ಅನ್ನು ಬಿಜೆಪಿ, ಬೋಗಸ್ ಕಾರ್ಡ್ ಎಂದು ಟೀಕಿಸಿತ್ತು. ಆದರೆ ಜನ ಕಾಂಗ್ರೆಸ್ ಪಕ್ಷದ ಮೇಲೆ ಭರವಸೆ ಇಟ್ಟು ಬಹುಮತ ನೀಡಿದ್ದಾರೆ. ಆದ್ದರಿಂದ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವುದು ಬೇಡ. ಇದು ಮಹಿಳೆಯರ ಆರ್ಥಿಕ ಹೊರೆ ಕಡಿಮೆ ಮಾಡಲಿದ್ದು, ಇದು ಬಿಟ್ಟಿ ಭಾಗ್ಯವಲ್ಲ, ಕಾಂಗ್ರೆಸ್‍ನ ಅಗತ್ಯ ಸೇವೆಯಾಗಿದೆ ಎಂದು ಸಮರ್ಥಿಸಿಕೊಂಡರು.

ಸೂಪರ್ ಸೀಡ್ ಎಚ್ಚರಿಕೆ

ಮಡಿಕೇರಿ ನಗರದಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ನಗರಸಭೆಯ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದಿಂದ ಎರಡು ಮೋಟಾರುಗಳು ಕೆಟ್ಟುಹೋಗಿವೆ. ಇದರಿಂದ ಜನ ಪರದಾಡುವಂತಾಗಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್ ಗೌಡ ಅವರು ತಮ್ಮ ಅನುದಾನದಲ್ಲಿ ಸುಸಜ್ಜಿತ ಮೋಟರ್ ಅಳವಡಿಸಲು ನಿರ್ಧರಿಸಿದ್ದಾರೆ. ಇನ್ನಾದರೂ ನಗರಸಭೆ ಎಚ್ಚೆತ್ತುಕೊಂಡು ಸಮರ್ಪಕವಾಗಿ ಕಾರ್ಯನಿರ್ವಹಿಸಬೇಕು. ಇಲ್ಲವಾದಲ್ಲಿ ನಗರಸಭೆಯನ್ನು ‘ಸೂಪರ್ ಸೀಡ್’ ಮಾಡಿ ಆಡಳಿತಾಧಿಕಾರಿ ಅಧಿಕಾರ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ತಂತ್ರಾಂಶ ಲೋಪ ಶೀಘ್ರ ಬಗೆಹರಿಕೆ

ಸರ್ಕಾರ ಉಪ ನೋಂದಣಿ ಕಛೇರಿಯಲ್ಲಿ ಕಾವೇರಿ 2 ತಂತ್ರಾಂಶ ಜಾರಿಗೊಳಿಸಿದ ಪರಿಣಾಮ ಅನೇಕ ಸಮಯಗಳಿಂದ ಆಸ್ತಿ ಕ್ರಯ, ಭೋಗ್ಯ, ಪರಭಾರೆ, ಖಾತೆ ವರ್ಗಾವಣೆ ಮುಂತಾದವು ನೋಂದಣಿ ಆಗುತ್ತಿಲ್ಲ. ಕಾವೇರಿ 2 ತಂತ್ರಾಂಶದಲ್ಲಿ ಎಕರೆ ಮತ್ತು ಗುಂಟೆಗಳ ಮಾನದಂಡವಿದ್ದು, ಕೊಡಗಿನಲ್ಲಿ ಎಕರೆ ಮತ್ತು ಸೆಂಟ್ಸ್ ದಾಖಲೆ ಇದೆ. ಈ ಹಿನ್ನೆಲೆಯಲ್ಲಿ ಶಾಸಕದ್ವಯರಿಗೆ ಪರಿಸ್ಥಿತಿಯನ್ನು ವಿವರಿಸಲಾಗಿದ್ದು, ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ ಎಂದು ಅವರು ಹೇಳಿದರು.

ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಮಾತನಾಡಿ, ನಗರದ ಹಲವು ಬಡಾವಣೆಗಳು ಬೀದಿ ದೀಪವಿಲ್ಲದೆ ಕತ್ತಲೆ ಆವರಿಸಿದೆ. ಇತ್ತೀಚೆಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ರಾತ್ರಿ ವೇಳೆ ಪ್ರಯಾಣಿಕರು ಹಾಗೂ ಸಾರ್ವಜನಿಕರು ಭಯದಿಂದಲೇ ಓಡಾಡಬೇಕಾದ ಪರಿಸ್ಥಿತಿ ಇದೆ. ಈಗ ಉತ್ಸಾಹಿ, ವಿದ್ಯಾವಂತ ಯುವಕ ಡಾ. ಮಂಥರ್ ಗೌಡ ಶಾಸಕರಾಗಿ ಬಂದಿದ್ದು, ಕೂಡಲೇ ಶಾಸಕರ ಸಹಕಾರದಿಂದ ನಗರಸಭೆ ಮಡಿಕೇರಿಯನ್ನು ಮಾದರಿ ನಗರವನ್ನಾಗಿ ರೂಪಿಸಲಿ ಎಂದು ಸಲಹೆ ನೀಡಿದರು.

ಡಿಸಿಸಿ ಸದಸ್ಯ ಚುಮ್ಮಿದೇವಯ್ಯ ಮಾತನಾಡಿ, ಮಳೆಗಾಲ ಸಮೀಪಿಸಿದ್ದು, ನಗರದ ಬಡಾವಣೆಗಳ ಚರಂಡಿಗಳು ಅವ್ಯವಸ್ಥೆಯಿಂದ ಕೂಡಿವೆ. ಇದರಿಂದ ವಾಹನ ಸವಾರರು, ಸಾರ್ವಜನಿಕರು ಪರದಾಡುವ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಬಡಾವಣೆಗಳ ಚರಂಡಿಗಳನ್ನು ಶುಚಿಗೊಳಿಸಿ ಚರಂಡಿಗಳನ್ನು ನಿರ್ಮಾಣ ಮಾಡಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಡಿಸಿಸಿ ಸದಸ್ಯರಾದ ಕಟ್ರತನ ವೆಂಕಟೇಶ್, ಟಿ.ಹೆಚ್.ಉದಯ ಕುಮಾರ್, ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಡೀರ ಸದಾ ಮುದ್ದಪ್ಪ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!