ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಿ20 ವಿಶ್ವಕಪ್ ಆಫ್ರಿಕಾ ಕ್ವಾಲಿಫೈಯರ್ ಸುತ್ತಿನಲ್ಲಿ ಇಂದು ಗ್ಯಾಂಬಿಯಾ ವಿರುದ್ಧದ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಬರೋಬ್ಬರಿ 344 ರನ್ ಕಲೆಹಾಕುವ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದೆ.
ನಾಯಕ ಸಿಕಂದರ್ ರಜಾ ನೇತೃತ್ವದ ಜಿಂಬಾಬ್ವೆ ಐಸಿಸಿ ಪುರುಷರ ಟಿ 20 ವಿಶ್ವಕಪ್ ಆಫ್ರಿಕಾ ಉಪ ಪ್ರಾದೇಶಿಕ ಅರ್ಹತಾ ಬಿ ನಲ್ಲಿ ಗಾಂಬಿಯಾ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭದಿಂದಲೂ ಗಾಂಬಿಯಾದ ಬೌಲರ್ ಗಳನ್ನು ಆಕ್ರಮಣಕಾರಿಯಾಗಿ ಬೆನ್ನಟ್ಟಿದ್ದ ಜಿಂಬಾಬ್ವೆ ಕೇವಲ 20 ಓವರ್ಗಳಲ್ಲಿ 344 ರನ್ಗಳೊಂದಿಗೆ ತಮ್ಮ ಇನ್ನಿಂಗ್ಸ್ ಅನ್ನು ಮುಗಿಸಿದರು. ಈ ಮೂಲಕ ವಿಶ್ವ ದಾಖಲೆ ಸೃಷ್ಟಿಸಿದೆ. ಇದರ ನಂತರ 314 ರನ್ ಬಾರಿಸಿದ್ದ ನೇಪಾಳ ತಂಡವಿದ್ದರೆ, 297 ರನ್ ಬಾರಿಸಿರುವ ಭಾರತ ತಂಡ ಮೂರನೇ ಸ್ಥಾನಕ್ಕೆ ಕುಸಿದಿದೆ. ಉಳಿದಂತೆ ನಾಲ್ಕನೇ ಸ್ಥಾನದಲ್ಲಿರುವ ಅಫ್ಘಾನಿಸ್ತಾನ 278 ರನ್, 278 ರನ್ ಗಳಿಸಿರುವ ಜೆಕಿಯಾ ತಂಡ ಐದನೇ ಸ್ಥಾನದಲ್ಲಿದೆ.
ಅತಿ ವೇಗದ ಟಿ20 ಶತಕ
ಇತ್ತ ಮತ್ತೊಂದು ಕಡೆ ಜಿಂಬಾಬ್ವೆಯ ಆಲ್ ರೌಂಡರ್ ಸಿಕಂದರ್ ರಜಾತಮ್ಮ ಬಿರುಸಿನ ಬ್ಯಾಟಿಂಗ್‌ನ ಆಧಾರದ ಮೇಲೆ ಟಿ20 ಕ್ರಿಕೆಟ್ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದು, ಇದರ ಜೊತೆಗೆ ರೋಹಿತ್ ಶರ್ಮಾ ಅವರ ದಾಖಲೆಯನ್ನು ಸಹ ಮುರಿದಿದ್ದಾರೆ.
ಗ್ಯಾಂಬಿಯಾ ವಿರುದ್ಧದ ಈ ಪಂದ್ಯದಲ್ಲಿ ಬರೋಬ್ಬರಿ 309.30 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ ಸಿಕಂದರ್ ರಾಝಾ ಕೇವಲ 33 ಎಸೆತಗಳಲ್ಲಿ ಶತಕ ಬಾರಿಸಿದರು. ಅಂತಿಮವಾಗಿ ತಮ್ಮ ಇನ್ನಿಂಗ್ಸ್ನಲ್ಲಿ 43 ಎಸೆತಗಳನ್ನು ಎದುರಿಸಿದ ರಾಝಾ 15 ಸಿಕ್ಸರ್ ಮತ್ತು 7 ಬೌಂಡರಿಗಳ ಸಹಿತ ಅಜೇಯ 133 ರನ್ ಕಲೆಹಾಕಿದರು.
ಸಿಕಂದರ್ ರಾಝಾ ಈ ಶತಕದ ಮೂಲಕ ದೊಡ್ಡ ದಾಖಲೆ ನಿರ್ಮಿಸಿದ್ದು, ಐಸಿಸಿಯ ಪೂರ್ಣ ಸದಸ್ಯ ತಂಡಗಳ ಪೈಕಿ ಅತಿ ವೇಗದ ಟಿ20 ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಹಾಗೆಯೇ 33 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಮತ್ತು ಡೇವಿಡ್ ಮಿಲ್ಲರ್ ಈ ಹಿಂದೆ ನಿರ್ಮಿಸಿದ್ದ ಅತಿ ವೇಗದ ಶತಕದ ದಾಖಲೆಯನ್ನು ಮುರಿದಿದ್ದಾರೆ.
ವಾಸ್ತವವಾಗಿ 2017ರಲ್ಲಿ ರೋಹಿತ್ ಶರ್ಮಾ ಹಾಗೂ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಕೇವಲ 35 ಎಸೆತಗಳಲ್ಲಿ ಟಿ20 ಶತಕ ಸಿಡಿಸಿದ್ದರು. ಇದೀಗ ಕೇವಲ 33 ಎಸೆತಗಳಲ್ಲಿ ಶತಕ ಸಿಡಿಸಿರುವ ರಾಝಾ, ಈ ಇಬ್ಬರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.