ಹೊಸದಿಗಂತ ಡಿಜಿಟಲ್ ಡೆಸ್ಕ್:
2018 ರ ಜಿರಾಕ್‌ಪುರ ಅತ್ಯಾಚಾರ ಪ್ರಕರಣದಲ್ಲಿ ಸ್ವಘೋಷಿತ ಕ್ರಿಶ್ಚಿಯನ್ ಪಾದ್ರಿ ಬಜೀಂದರ್ ಸಿಂಗ್ ದೋಷಿ ಎಂದು ಮಾ. 28 ರಂದು ನ್ಯಾಯಾಲಯ ತೀರ್ಪು ನೀಡಿತ್ತು. ಇದೀಗ ಜೀವಾವಧಿ ಶಿಕ್ಷೆ ವಿಧಿಸಿದೆ.
ಮೊಹಾಲಿಯ ಜಿರಾಕ್‌ಪುರದ ಸಂತ್ರಸ್ತೆ, ಪಾದ್ರಿ ಬಜೀಂದರ್ ಸಿಂಗ್ ವಿರುದ್ಧ 2018ರಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ಸಂಬಂಧ ಪಾದ್ರಿ ಬಜೀಂದರ್ ಸಿಂಗ್ ಇಂದು ನ್ಯಾಯಾಲಯಕ್ಕೆ ಹಾಜರಾದರು. ಅಪರಾಧಿ ಸಮ್ಮುಖದಲ್ಲೇ ನ್ಯಾಯಧೀಶರು ಶಿಕ್ಷೆ ಪ್ರಕಟಿಸಿದರು.
ಸಂತ್ರಸ್ತೆಯನ್ನು ವಿದೇಶಕ್ಕೆ ಕಳುಹಿಸುವ ನೆಪದಲ್ಲಿ ಪಾದ್ರಿ ಬಜೀಂದರ್ ಸಿಂಗ್, ಆಕೆಯನ್ನು ಮನೆಗೆ ಕರೆದೊಯ್ದು ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿ ಮತ್ತು ಲೈಂಗಿಕ ದೌರ್ಜನ್ಯದ ವಿಡಿಯೋ ಮಾಡಿದ್ದ. ಈ ಬಗ್ಗೆ ದೂರು ನೀಡಿದರೆ ಆ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಪಾದ್ರಿಯ ವಿರುದ್ಧ 2018 ರಲ್ಲಿ ಮೊಹಾಲಿಯ ಜಿರಾಕ್‌ಪುರ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ, ಹಲ್ಲೆ ಮತ್ತು ಬೆದರಿಕೆ ಪ್ರಕರಣ ದಾಖಲಾಗಿತ್ತು.