ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಶಸ್ತ್ರ ಪಡೆಗಳಿಗೆ ಅಲ್ಪಾವಧಿಗೆ ‘ಅಗ್ನಿವೀರ’ರನ್ನು ನೇಮಿಸಿಕೊಳ್ಳುವ ‘ಅಗ್ನಿಪಥ್ ಯೋಜನೆ’ಯನ್ನು ಹಿಂಪಡೆಯುವ ಮಾತೇ ಇಲ್ಲ ಎಂದು ರಾಷ್ಟ್ರಿಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದ್ದಾರೆ. ಇದು ರಾತ್ರೋರಾತ್ರಿ ನಿರ್ಣಯಿಸಿ ಘೋಷಿಸಿದ ಯೋಜನೆಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಗ್ನಿಪಥ್ ಯೋಜನೆಗೆ ವ್ಯಕ್ತವಾಗುತ್ತಿರುವ ಆಕ್ಷೇಪಗಳ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಈ ಯೋಜನೆ ಜಾರಿ ಮಾಡಲು ದಶಕಗಳಿಂದ ಚರ್ಚಿಸಲಾಗಿದೆ. ಹಲವಾರು ಸಮಿತಿಗಳು ಸಶಸ್ತ್ರ ಪಡೆಗಳ ಸರಾಸರಿ ವಯಸ್ಸನ್ನು ಕಡಿಮೆ ಮಾಡಲು ಸಲಹೆ ನೀಡಿವೆ ಎಂದು ಹೇಳಿದರು.ಅಗ್ನಿಪಥ್ ಯೋಜನೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಇದನ್ನು ರಾತ್ರಿ ಕುಳಿತು ಮಾತನಾಡಿ ಬೆಳಗಾಗುವುದರೊಳಗೆ ಘೋಷಿಸಿಲ್ಲ. ಇದು ದಶಕಗಳ ಕಾಲ ಚರ್ಚಿಸಿ, ಹಲವಾರು ತಜ್ಞರ ಸಲಹೆಯ ಆಧಾರದ ಮೇಲೆ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಕೊನೆಯಲ್ಲ, ಮತ್ತೆ ತರಬೇತಿ:
ಅಗ್ನಿಪಥ್ ಯೋಜನೆಯಡಿ ಆಯ್ಕೆಯಾದ ಅಗ್ನಿವೀರರಿಗೆ ತರಬೇತಿ ನೀಡಲಾಗುತ್ತದೆ. ಬಳಿಕ ಅವರು ಸೇನೆಗೆ ಸೇರಿದ ಮೇಲೆ ಇನ್ನಷ್ಟು ಕಠಿಣ ತರಬೇತಿ ನೀಡಲಾಗುತ್ತದೆ. ಇದು ಅವರನ್ನು ಪರಿಪೂರ್ಣ ಯೋಧನನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.