ಹೊಸದಿಗಂತ ಡಿಜಿಟಲ್ ಡೆಸ್ಕ್:
ಸ್ಪಂದನಾ ವಿಜಯ್ ರಾಘವೇಂದ್ರ ಅವರ ಹಠಾತ್ ನಿಧನ ಮತ್ತೊಮ್ಮೆ ರಾಜ್ಯದಲ್ಲಿ ಆತಂಕದ ಛಾಯೆ ಮೂಡಿಸಿದ್ದು, ಹಾರ್ಟ್ ಅಟ್ಯಾಕ್ ಭೀತಿ ಶುರುವಾಗಿದೆ.
ಈ ನಿಟ್ಟಿನಲ್ಲಿ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿಎನ್ ಮಂಜುನಾಥ್ ಮಾತನಾಡಿದ್ದು, ‘ಅತಿಯಾದ ಒತ್ತಡ ಎನ್ನುವುದು ಈ ಯುಗದ ತಂಬಾಕು..ಎಚ್ಚರವಾಗಿರಿ’ ಎಂದು ಸಲಹೆ ನೀಡಿದ್ದಾರೆ.
ನಮ್ಮ ರಾಜ್ಯ ಹಾಗೂ ದೇಶದಲ್ಲಿ ಅದರಲ್ಲೂ ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಹೃದಯಾಘಾತದ ಪ್ರಮಾಣ ಬಹಳ ಹೆಚ್ಚಾಗುತ್ತಿದೆ . ನಿಜವಾಗಲೂ ಇದು ಬಹಳ ನೋವಿನ ಸಂಗತಿ.
ಯುವಜನತೆ ಅತಿಯಾದ ವ್ಯಾಯಾಮ ಮಾಡೋದು ಒಳ್ಳೆಯದಲ್ಲ. 6 ತಿಂಗಳಲ್ಲೇ 15-20 ಕೆಜಿ ತೂಕ ಕಡಿಮೆ ಆಗಬೇಕು ಎನ್ನುವ ನಿಟ್ಟಿನಲ್ಲಿ ಅತಿಯಾಗಿ ವ್ಯಾಯಾಮ ಮಾಡುತ್ತಾರೆ. ಇದು ಒಳ್ಳೆಯದಲ್ಲ. ನಮ್ಮಲ್ಲಿ ಕೆಲವರು ಬರುತ್ತಾರೆ. ಮೂರು ದಿನದ ಹಿಂದೆ ತಿರುಪತಿ ಬೆಟ್ಟ ಹತ್ತಿದ್ದೆ. ಬೆಟ್ಟ ಹತ್ತಿ ಶಬರಿಮಲೆ ದರ್ಶನ ಮಾಡಿದ್ದೆ. ಇದಾದ ಮೂರು ದಿನಗಳ ಬಳಿಕ ನನಗೆ ಹೃದಯಾಘಾತವಾಗಿದೆ ಎನ್ನುತ್ತಾರೆ. ಅಲ್ಲೇ ಯಾಕೆ ಆಗಿಲ್ಲ ಅಂತಾ ಪ್ರಶ್ನೆ ಮಾಡ್ತಾರೆ. ಆದರೆ, ಅತಿಯಾದ ವ್ಯಾಯಾಮ ಮಾಡಿದರೆ ರಕ್ತನಾಳದ ಒಳಗಡೆ ಇರುವಂಥ ಕೊಲೆಸ್ಟ್ರಾಲ್ ಅಲ್ಸರ್‌ಗಳು ಒಡೆದು ಹೋಗುತ್ತದೆ. ನಾವು ಯಾವುದೇ ಟೆಸ್ಟ್ ಮಾಡಿದರೂ ಹಾರ್ಟ್ ಅಟ್ಯಾಕ್‌ಗೆ ಕಾರಣ ಏನು ಅನ್ನೋದು ಗೊತ್ತಾಗೋದಿಲ್ಲ. ಇಂಥ ಸಮಯದಲ್ಲಿ ಹಾರ್ಟ್ ಆಟ್ಯಾಕ್ ಆಗುವ ಸಣ್ಣ ಸೂಚನೆ ಕೂಡ ಅವರಿಗೆ ಸಿಗೋದಿಲ್ಲ. ಅತಿಯಾದ ಒತ್ತಡ, ವ್ಯಾಯಾಮ, ಎನರ್ಜಿ ಡ್ರಿಂಕ್ ಕುಡಿಯೋದು ಒಳ್ಳೆದಲ್ಲ. ಪಿಒಸಿಡಿ, ಫ್ಯಾಟಿ ಲಿವರ್‌ಗಳು ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತದೆ ಎಂದರು.
ಸಾಮಾನ್ಯವಾಗಿ ನಿಮಿಷಕ್ಕೆ ಹೃದಯದ ಬಡಿತ 70-80 ಇರುತ್ತದೆ. ಗಾಬರಿಯಾದಾಗ ಅದು 90 ಆಗುತ್ತದೆ. ಆದರೆ, ಹಾರ್ಟ್ ಅಟ್ಯಾಕ್ ಆದಾಗ 300ಕ್ಕೂ ಹೋಗುತ್ತದೆ.ಈ ಹಂತದಲ್ಲಿ ಹೃದಯದಿಂದ ರಕ್ತ ಹೊರಗೆ ಬರೋದೇ ಇಲ್ಲ. ಇದನ್ನು ವೆಂಟಿಕ್ಯುಲರ್ ಸಿಬ್ರಲ್ಯುಷನ್ ಎನ್ನುತ್ತೇವೆ. ಬದುಕುಳಿಯುವ ಸಣ್ಣ ಕಾಲಾವಕಾಶ ಕೂಡ ಸಿಗೋದಿಲ್ಲ. ಇಂಥ ಸಾವು ದುರಾದೃಷ್ಟಕರ. ಕೆಲವೊಬ್ಬರಿಗೆ ಹೃದಯಾಘಾತ ಆಗಿ ಒಂದು ದಿನದ ನಂತರ ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಆಸ್ಪತ್ರೆ ಬರುವವರೆಗೆ ನೋವು ಇರುತ್ತದೆಯೇ ಹೊರತು, ಹೃದಯ ನಿಂತಿರೋದಿಲ್ಲ. ಇದು ಹಾರ್ಟ್ ಅಟ್ಯಾಕ್. ಕಾರ್ಡಿಯಾಕ್ ಅರೆಸ್ಟ್ ಅಂದ್ರೆ ಹೃದಯ ನಿಂತು ಹೋಗುವುದು. ಹೃದಯಾಘಾತದ 100 ರೋಗಿಗಳಲ್ಲಿ 5-6 ರೋಗಿಗಳಿಗೆ ಮಾತ್ರವೇ ಹೀಗಾಗುತ್ತದೆ. ರಕ್ತನಾಳದ ಬ್ಲಾಕೇಜ್ ಇದ್ದಿರುವವರಿಗೆ ಹಾರ್ಟ್ ಅಟ್ಯಾಕ್‌ನ ಸುಳಿವು ಸಿಗುತ್ತದೆ ಎಂದಿದ್ದಾರೆ.
ನಮ್ಮ ಅಧ್ಯಯನದ ಪ್ರಕಾರ 45 ವರ್ಷಕ್ಕಿಂತ ಚಿಕ್ಕವರಲ್ಲಿ ಆಗಿರುವ ಹೃದಯಾಘಾತದ ಕೇಸ್‌ಗಳಲ್ಲಿ ಶೇ. 8ರಷ್ಟು ಮಹಿಳೆಯರಾಗಿದ್ದಾರೆ. 29 ವರ್ಷದ ವೈದ್ಯ, 30 ವರ್ಷದ ಸಾಫ್ಟ್‌ವೇರ್ ಕಂಪನಿಯ ಸಿಇಒ ಹಾಗೂ ತೀರಾ ಇತ್ತೀಚೆಗೆ 24 ವರ್ಷದ ಕೂಲಿ ಕಾರ್ಮಿಕ ಮಹಿಳೆಗೆ ಹೃದಯ ಸಂಬಂಧಿ ಚಿಕಿತ್ಸೆ ನೀಡಿದ್ದೇವೆ. ಇದನ್ನು ನೋಡುವುದಾದರೆ, ನಮ್ಮಲ್ಲಿ ಯುವಕರು ಹಾಗೂ ಮಧ್ಯವಯಸ್ಕರಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿದೆ ಎಂದಿದ್ದಾರೆ.
ಸಾಮಾನ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಹೃದಯಾಘಾತದ ಸಂಖ್ಯೆ ಅಧಿಕ. ಈಗ ಭಾರತದಲ್ಲೂ ಅದೇ ಟ್ರೆಂಡ್ ಆಗುತ್ತಿದೆ. ಅತಿಯಾದ ಮದ್ಯಪಾನ, ಧೂಮಪಾನ, ಸಕ್ಕರೆ ಕಾಯಿಲೆ, ಕೊಬ್ಬಿನ ಅಂಶ ಹಾಗೂ ಅತಿಯಾದ ರಕ್ತದೊತ್ತಡ ಇದ್ದಲ್ಲಿ ಹೃದಯಾಘಾತವಾಗುತ್ತದೆ. ಇವೆಲ್ಲವೂ ಸಾಮಾನ್ಯ ಕಾರಣಗಳು ಎಂದಿದ್ದಾರೆ.
ಆದರೆ, ನಾವು ಮಾಡಿರುವ ಯುವ ಹೃದಯರೋಗಿಗಳ ಅಧ್ಯಯನದ ಪ್ರಕಾರ ಶೇ. 25ರಷ್ಟು ರೋಗಿಗಳಲ್ಲಿ ಯಾವುದೇ ಕಾರಣವಿಲ್ಲದೆ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಸಕ್ಕರೆ ಕಾಯಿಲೆ ಇಲ್ಲ, ಬಿಪಿ ಇಲ್ಲ. ಆದರೆ, ಅತಿಯಾದ ಒತ್ತಡದಿಂದಲೂ ಹೃದಯಾಘಾತ ಆಗುತ್ತಿದೆ. ಒತ್ತಡವನ್ನು ಈ ಯುಗದ ತಂಬಾಕು ಎಂದೇ ಹೇಳಬಹುದು. ಅದರೊಂದಿಗೆ ಈಗಿನ ಆಹಾರಗಳು, ನಮ್ಮ ಜೀವನಶೈಲಿ ಇದೆಲ್ಲವೂ ಕೂಡ ಹೃದಯಾಘಾತಕ್ಕೆ ಕಾರಣವಾಗುತ್ತಿದೆ. ಡ್ರಗ್ ಅಭ್ಯಾಸ ಇರುವ ಕಾಲೇಜು ವಿದ್ಯಾರ್ಥಿಗಳಲ್ಲೂ ಹೃದಯಾಘಾತ ಹೆಚ್ಚಾಗಿದೆ ಎಂದರು.
ಕಳೆದ 10-15 ವರ್ಷದಲ್ಲಿ ಯುವಕರಲ್ಲಿ ಹೃದಯಾಘಾತದ ಪ್ರಮಾಣ ಶೇ. 22ರಷ್ಟು ಹೆಚ್ಚಾಗಿದೆ ಅನ್ನೋದು ನಮ್ಮ ಅಧ್ಯಯನದಿಂದ ಬಂದಿರುವ ಮಾಹಿತಿ. ಸ್ಪಂದನಾ ಕೇಸ್‌ನಲ್ಲಿ ಹೃದಯಾಘಾತದಿಂದಾಗಿ ಲೋ ಬಿಪಿ ಆಗಿದೆ. ಲೋ ಬಿಪಿಯಿಂದಾಗಿ ಹೃದಯಾಘಾತವಾಗೋದಿಲ್ಲ. ಸಾಮಾನ್ಯವಾಗಿ ಬಿಪಿ 120/80 ಇರಬೇಕು. ಆದರೆ, ಮಹಿಳೆಯರಲ್ಲಿ 90/70 ಇರುತ್ತದೆ. ಆದರೆ. ಹಾರ್ಟ್ ಅಲ್ಲಿ ಯಾವುದೇ ಸಮಸ್ಯೆ ಇರೋದಿಲ್ಲ. ಲೋ ಬಿಪಿ ಇರುವವರು ಬಿಸಿಲಲ್ಲಿ ನಿಂತಾಗ, ಊಟ ಮಾಡದೇ ಇದ್ದಾಗ ತಲೆ ಸುತ್ತು ಬರೋಕೆ ಸ್ಟಾರ್ಟ್ ಆಗುತ್ತೆ. ಆದರೆ, ಹೃದಯಾಘಾತ ಆಗೋದಿಲ್ಲ ಎಂದರು. .