Friday, December 8, 2023

Latest Posts

ಕಾವೇರಿ ಮೇಲೆ ಮೊದಲ ಹಕ್ಕು ನಮ್ಮದೇ: ನಟ ಉಪೇಂದ್ರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವ ವಿಚಾರವಾಗಿ ರಾಜ್ಯದ ಹಲವೆಡೆ ಪ್ರತಿಭಟನೆ, ಬಂದ್​ ನಡೆದಿದೆ.ಕನ್ನಡ ಚಿತ್ರರಂಗ ಕೂಡ ಹೋರಾಟಕ್ಕೆ ಬೆಂಬಲ ಸೂಚಿಸಿದೆ.

ಇದೀಗ ನಟ, ನಿರ್ದೇಶಕ ರಿಯಲ್​ ಸ್ಟಾರ್ ಉಪೇಂದ್ರ ಕೂಡ ಟ್ವೀಟ್​ ಮೂಲಕ ಕಾವೇರಿ ಮೇಲೆ ಮೊದಲ ಹಕ್ಕು ನಮ್ಮದೇ ಎಂದು ತಿಳಿಸಿ, ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ.

ಕನ್ನಡದ ಖ್ಯಾತ ಸಾಹಿತಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಬರಹವನ್ನು ಹಂಚಿಕೊಂಡಿದ್ದು, ಅದಕ್ಕೆ ‘ಕಾವೇರಿ ವಿವಾದ’ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಜೊತೆಗೆ ಈ ಪೋಸ್ಟ್​​ಗೆ ಕೈಮುಗಿಯುವ ಎಮೋಜಿಯನ್ನೂ ಹಾಕಿಕೊಂಡಿದ್ದಾರೆ.

‘ಯಾವುದೇ ಭೂಭಾಗಕ್ಕೆ ಅದರದ್ದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳು ಇರುತ್ತವೆ. ಅಲ್ಲಿನ ನೈಸರ್ಗಿಕ ಸಂಪತ್ತಿನ ಒಡೆತನ ಮತ್ತು ಅದರ ಮೊದಲ ಬಳಕೆಯ ಹಕ್ಕು ಆಯಾ ಪ್ರದೇಶದ ಜನಸಮುದಾಯದ್ದಾಗಿರುತ್ತದೆ. ಭೂಮಿಯ ಮೇಲಿನ ಖನಿಜ ಸಂಪತ್ತು, ಭೂಮಿಯ ಮೇಲಿನ ಅರಣ್ಯ ಉತ್ಪನ್ನಗಳು ಹೇಗೆ ಆಯಾ ಸರ್ಕಾರದ ಆಸ್ತಿಯೋ, ಹಾಗೆಯೇ ಆಪ್ರದೇಶದಲ್ಲಿ ಸುರಿಯುವ ಮಳೆ ಹಾಗೂ ಹರಿಯುವ ನೀರಿಗೂ ಆ ಪ್ರದೇಶದ ಜೀವ ವೈವಿಧ್ಯವೇ ಪ್ರಥಮ ಹಕ್ಕುದಾರ ಆಗಿರುತ್ತಾನೆ. ಹಾಗಾಗಿ ಕಾವೇರಿ ನೀರಿನ ಮೊದಲ ಹಕ್ಕು ನಿರ್ವಿವಾದವಾಗಿ ಕರ್ನಾಟಕ್ಕದ್ದೇ ಆಗಿರುತ್ತದೆ. ನಮ್ಮ ಅಗತ್ಯತೆಯನ್ನು ಪೂರೈಸಿದ ನಂತರವಷ್ಟೇ ಇತರರಿಗೆ ನೆರವಾಗುವ ಪ್ರಶ್ನೆ ಉದ್ಭವಿಸುತ್ತದೆ. -ಕೆ.ಪಿ ಪೂರ್ಣಚಂದ್ರ ತೇಜಸ್ವಿ” ಎಂದು ಬರೆಯಲಾಗಿದೆ.

ಇದಕ್ಕೂ ಮುನ್ನ ಸೆಪ್ಟೆಂಬರ್​ 20 ರಂದು ಕೂಡ ನಟ ಉಪೇಂದ್ರ ಕಾವೇರಿ ಕುರಿತು ಟ್ವೀಟ್​ ಮಾಡಿದ್ದರು. ‘ಈಗಾಗಲೇ ಸರಿಯಾಗಿ ಮಳೆಯಾಗದೇ ನೀರಿನ ಅಭಾವ ಸಾಕಷ್ಟು ಇರುವುದರಿಂದ ಕಾವೇರಿ ನೀರಿನ ಹಂಚಿಕೆಯ ವಿಷಯದಲ್ಲಿ ನಮ್ಮ ರೈತಾಪಿ ಬಾಂಧವರಿಗೆ ಸಮಸ್ಯೆ ಆಗದಂತೆ ತಜ್ಞರು ನಿರ್ಣಯ ತೆಗೆದುಕೊಳ್ಳಬೇಕೆಂದು ವಿನಂತಿಸಿಕೊಳ್ಳುತ್ತೇನೆ. ನಮ್ಮ ರೈತರ ನೀರಿನ ಸಮಸ್ಯೆಗೆ ಒಂದು ಶಾಶ್ವತ ಪರಿಹಾರವನ್ನೂ ಆದಷ್ಟು ಬೇಗ ತಜ್ಞರು ಹುಡುಕಿ ಕಾರ್ಯರೂಪಕ್ಕೆ ತರಲಿ ಎಂದು ಆಶಿಸೋಣ’ಎಂದು ಟ್ವೀಟ್​​ ಮಾಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!